
ಮಂಗಳೂರು: ಮಂಗಳೂರು 92.7 ಬಿಗ್ ಎಫ್ ಎಂ ನ ರೇಡಿಯೋ ಜಾಕಿ, ನಿರೂಪಕಿ ಆರ್ ಜೆ ನಯನಾ ಶೆಟ್ಟಿಯವರ ಮೊದಲ ಪುಸ್ತಕ “ಈ ಪಯಣ ನೂತನ” ಬೆಂಗಳೂರಿನಲ್ಲಿ ಕುಂದಾಪ್ರ ಕನ್ನಡ ಪ್ರತಿಷ್ಠಾನ ಆಯೋಜನೆ ಮಾಡಿದ್ದ ಕುಂದಾಪ್ರ ಕನ್ನಡ ಹಬ್ಬದಲ್ಲಿ ಬಿಡುಗಡೆ ಗೊಂಡಿತು, ಕರಾವಳಿಯ ಪರಿಸರ, ಇಲ್ಲಿ ನಡೆದ ಕೆಲವು ಘಟನೆಗಳು, ರೇಡಿಯೋದಲ್ಲಿ ಸಂದರ್ಶನದ ಸಮಯದಲ್ಲಿ ವಿವಿಧ ಕ್ಷೇತ್ರಕ್ಕೆ ಸೇವೆ ಸಲ್ಲಿಸುತ್ತಿರುವವರಿಂದ ಕೇಳಿದ ಸತ್ಯ ಘಟನೆಗಳನ್ನು ಆಧರಿಸಿದ, ವೈಚಾರಿಕ , ವ್ಯಕ್ತಿತ್ವ ವಿಕಸನ,. ಪರಿಸರ ಸಂರಕ್ಷಣೆ, ಪ್ರಾಣಿ ಪ್ರೀತಿ, ಹಿರಿಯ ನಾಗರೀಕರ ಸಮಸ್ಯೆಗಳು , ರೇಡಿಯೋ ಜಗತ್ತಿನ ಹಲವು ಕೌತುಕ ಗಳನ್ನು ಹೊತ್ತು ತಂದಿರುವ ಕೃತಿಯಾಗಿದ್ದು ಓದುಗರನ್ನು ತನ್ಮಯರಾಗುವಂತೆ . ಮಾಡುತ್ತಾ ಕಳೆದುಹೋದ ಬದುಕಿನ ಒಂದಿಷ್ಟು ಘಳಿಗೆಗಳನ್ನು ಮತ್ತೆ ನೆನಪಿಗೆ ತರುತ್ತಾ, ಮರೆತಿರುವ ಓದುಗರನ್ನು ಒಂದಿಷ್ಟು ಚಿಂತನೆಗೆ ಹಚ್ಚುವಲ್ಲಿ ಯಶಸ್ವಿಯಾಗಿದೆ,. ಪುಸ್ತಕದ ಮುನ್ನುಡಿಯನ್ನು ಬರೆದಿರುವ ಹಾಗೆಯೇ ಪುಸ್ತಕದ ಬಿಡುಗಡೆಯನ್ನು ಮಾಡಿದ ಜೋಗಿ ಅವರು
ಮಾತನ್ನೇ ನೆಚ್ಚಿಕೊಂಡಿರುವ ವೃತ್ತಿಯಲ್ಲಿ ಇರುವವರು ಬರೆಯುವುದು ಕಡಿಮೆ. ಓದುವುದು ಇನ್ನೂ ಕಡಿಮೆ. ಬರಹಕ್ಕಿಂತ ಮಾತು ಬೇಗ ತಲುಪುತ್ತದೆ ಎಂದು ಎಲ್ಲರೂ ನಂಬಿರುವ ಯುಗದಲ್ಲಿ ನಯನಾ ಶೆಟ್ಟಿ, ತನ್ನ ಅನಿಸಿಕೆ, ತಾನು ನೋಡಿದ್ದು, ಅನುಭವಿಸಿದ್ದು, ಆಹ್ಲಾದಪಟ್ಟದ್ದು, ಮೆಚ್ಚಿಕೊಂಡದ್ದು- ಇವನ್ನೆಲ್ಲ ಲಹರಿಯ ರೂಪದಲ್ಲಿ ಬರೆದಿದ್ದಾರೆ.
ತನ್ನ ಕಾಲದ ಬಹುತೇಕ ಬರಹಗಾರರ ಹಾಗೆಯೇ, ಇವರ ಬರಹಗಳು ಕೂಡ ತನ್ನ ಸಂತೋಷವನ್ನು ಮತ್ತೊಬ್ಬರಿಗೆ ತಕ್ಷಣ ಹೇಳಬೇಕು ಎಂಬ ಉತ್ಸಾಹದಲ್ಲಿ ಹುಟ್ಟಿಕೊಂಡಂಥವು. ಸಂಕಲನದ ಮೊದಲ ಲೇಖನ ‘ಖುಷಿಯ ಸುತ್ತ ಒಂದಷ್ಟು ಹೊತ್ತು’ ಅತ್ಯಂತ ಖುಷಿಯಾಗಿರುವ ರಾಷ್ಟ್ರ ಯಾವುದು ಎಂಬ ಪ್ರಶ್ನೆಯೊಂದಿಗೆ ಆರಂಭವಾಗುತ್ತದೆ. ಹೀಗೆ ಹ್ಯಾಪಿನೆಸ್ ಹುಡುಕುತ್ತಾ ಹೋಗುವ ಅನೇಕ ಬರಹಗಳಿರುವ ಈ ಸಂಕಲನಕ್ಕೆ ಅವರು ಈ ಪಯಣ ನೂತನ ಎಂಬ ಹೆಸರಿಟ್ಟಿದ್ದಾರೆ. ಮೊದಲ ಸಂಕಲನಕ್ಕೆ ಮತ್ತು ಬರಹ ಎಂಬ ಪ್ರಯಾಣದ ಶುಭಾರಂಭಕ್ಕೆ ಸೂಕ್ತ ಶೀರ್ಷಿಕೆ.
ಸದಾ ಖುಷಿಯಾಗಿರುವುದು ಹೇಗೆ?, ಮಕ್ಕಳನ್ನು ಸ್ವಾವಲಂಬಿಗಳನ್ನಾಗಿ ಮಾಡುವ ರೀತಿ, ರಾಮನಗುಡ್ಡಕ್ಕೆ ಪ್ರವಾಸಹೋದ ಅನುಭವ ಕಥನ, ಅರಳಿಮರದ ಸುತ್ತ ಹಬ್ಬಿದ ನಂಬಿಕೆಗಳು, ನಾಯಿ ಸಾಕುವ ಸುಖ-ದುಃಖ, ಹಲಸಿನ ಹಣ್ಣಿನ ವೈಭವ- ಹೀಗೆ ಅನೇಕ ಸಂಗತಿಗಳನ್ನು ರಸವತ್ತಾಗಿ ನಯನಾ ವರ್ಣಿಸುತ್ತಾ ಹೋಗಿದ್ದಾರೆ. ಅನುಭವ ಕಥನಗಳೂ ನೆನಪಿನ ಚಿತ್ರಗಳೂ ಮನೋಲಹರಿಗಳೂ ಕಲ್ಪನಾವಿಹಾರಗಳೂ ಇಲ್ಲಿ ಸೇರಿಕೊಂಡಿವೆ.
ಈ ಬರಹಗಳ ಬಹುದೊಡ್ಡ ಶಕ್ತಿಯೆಂದರೆ ಪ್ರಾಮಾಣಿಕತೆ. ನಯನಾ ತಮಗೆ ತೋಚಿದ್ದನ್ನು ಯಾವ ಸಿದ್ಧಾಂತದ ಭಾರವೂ ಇಲ್ಲದೇ ಹೇಳುತ್ತಾ ಹೋಗುತ್ತಾರೆ. ಈ ಸಂಕಲನದ ಶೀರ್ಷಿಕೆಯೂ ಸೂಚಿಸುವಂತೆ ಈ ಬರಹದ ಉದ್ದೇಶ ಪ್ರಯಾಣ ಮತ್ತು ಆ ಸಂತೋಷವನ್ನು ಹಂಚುವುದು. ಹೀಗಾಗಿ ಇವುಗಳಿಗೆ ವೈಚಾರಿಕತೆಯ ಭಾರ ಇಲ್ಲ, ಸಿದ್ಧಾಂತದ ಬೇಲಿಯೂ ಇಲ್ಲ. ಕಾಡಿನ ನಡುವೆ ಸುಮ್ಮಾನದಿಂದ ಹರಿಯುವ ತೊರೆಯ ಸ್ವಚ್ಛಂದ ಸುಖದಲ್ಲಿ ಈ ಪ್ರಬಂಧಗಳು ಓದುಗನನ್ನೂ ಮುದಗೊಳಿಸುತ್ತವೆ.
ಹಿರಿಯರ ಬಗ್ಗೆ ಕಾಳಜಿ, ಮಕ್ಕಳನ್ನು ಬೆಳೆಸುವ ರೀತಿ, ಸಾಕುಪ್ರಾಣಿಗಳ ಕುರಿತ ಪ್ರೀತಿ, ಸಾಮಾಜಿಕ ನಡವಳಿಕೆ, ಜೀವನದಲ್ಲಿ ಕಲಿಯಲೇಬೇಕಾದ ಪಾಠಗಳು, ಅಲ್ಲಲ್ಲಿ ಕಂಡು ಕಲಿತ ಸಂಗತಿಗಳು- ಹೀಗೆ ಅನೇಕ ಸಂಗತಿಗಳನ್ನು ನಯನಾ ಶೆಟ್ಟಿ ಈ ಬರಹಗಳಲ್ಲಿ ದಾಖಲಿಸಿದ್ದಾರೆ. ನಾನು ಇವುಗಳನ್ನು ಓದುತ್ತಾ, ನಾನು ಮೊದಲು ಬರೆಯಲು ಆರಂಭಿಸಿದ ದಿನಗಳಿಗೆ ಮರಳಿದ್ದೇನೆ ಎಂದರು .
ಪುಸ್ತಕ ಮಂಗಳೂರಿನ ಅಂಬೇಡ್ಕರ ಭವನದಲ್ಲಿ ನಡೆದ ನಾಲ್ಕನೇ ವರ್ಷದ ಕುಡ್ಲದಗಿಪ್ಪ ಕುಂದಾಪುರದರ್ ತಂಡದ ಕಾರ್ಯಕ್ರಮದಲ್ಲಿ ಪ್ರದರ್ಶನಗೊಂಡಿತು. ವೇದಿಕೆಯಲ್ಲಿ ಕುಂದಾಪ್ರಕನ್ನಡ ಪ್ರತಿಷ್ಠಾನದ ಅಧ್ಯಕ್ಷರಾದ ದೀಪಕ ಶೆಟ್ಟಿ ಬಾರ್ಕೂರು, ಕುಡ್ಲದಗಿಪ್ಪ ಕುಂದಾಪಯರ ತಂಡದ ಅಧ್ಯಕ್ಷೆ ಮಾಲಾ ಶೆಟ್ಟಿ, ಕಲಾಕ್ಷೇತ್ರ ಕುಂದಾಪುರದ ಅಧ್ಯಕ್ಷರಾದ ಕಿಶೋರ್ ಕುಮಾರ್, ಲೆಕ್ಕ ಪರಿಶೋಧಕರಾದ ಸಿ ಎ ಯಸ್ ಯಸ್ ನಾಯಕ್,ಕುಲಾಲ್ ಟ್ರಸ್ಟ್ ನ ಸ್ಥಾಪಕರಾದ ಡಾಕ್ಟರ್ ಅಣ್ಣಯ್ಯ ಕುಲಾಲ್, ದಕ್ಷಿಣ ಕನ್ನಡ ಜಿಲ್ಲೆಯ ಪಶುಪಾಲನಾ ಮತ್ತು ಪಶು ವೈದ್ಯಕೀಯ ಉಪನಿರ್ದೇಶಕ ಡಾಕ್ಟರ್ ಅರುಣ್ ಕುಮಾರ ಶೆಟ್ಟಿ ,ಕುಡ್ಲದಗಿಪ್ಪ ಕುಂದಾಪುರ ತಂಡದ ಗೌರವ ಅಧ್ಯಕ್ಷರಾದ ಗೋಪಾಲಕೃಷ್ಣ ಶೆಟ್ಟಿ, ಕಾರ್ಯದರ್ಶಿ ಲಿಖಿತ ಶೆಟ್ಟಿ ಬೂದಾಡಿ ಉಪಸ್ಥಿತರಿದ್ದರು.
ಕರುಣಾಕರ್ ಬಲ್ಕೂರು ಮತ್ತು ಆರ್ ಜೆ ನಯನಾ ಕಾರ್ಯಕ್ರಮ ನಿರೂಪಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿಈಗಾಗಲೇ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ ಈ ಪುಸ್ತಕಕ್ಕೆ. … ಬೇಡಿಕೆಯು ಹೆಚ್ಚಾಗಿದ್ದು ಪುಸ್ತಕ ಪ್ರಿಯರು ಪುಸ್ತಕವನ್ನು ಕೇಳಿ ಪಡೆಯುತ್ತಿದ್ದಾರೆ. ಯುವ ಪೀಳಿಗೆಗೆ ದಾರಿದೀಪವಾಗಬಹುದಾದ ವಿಚಾರಗಳು ಮತ್ತು ಮಾಹಿತಿಗಳನ್ನು ಪುಸ್ತಕ ಒಳಗೊಂಡಿದೆ. ಮುಂದಿನ ದಿನಗಳಲ್ಲಿ ಅತಿ ಶೀಘ್ರದಲ್ಲಿ ಹಲವಾರು ಪುಸ್ತಕ ಮಳಿಗೆಗಳಲ್ಲಿ ಲಭ್ಯವಾಗಲಿದೆ