
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಬಾಳೆಬರೆ ಘಾಟ್ ಪ್ರದೇಶದಲ್ಲಿ ಭಾರಿ ಮಳೆಯಿಂದ ಮಣ್ಣು ಕುಸಿತ ಸಂಭವಿಸಿರುವ ಕಾರಣ ಸುರಕ್ಷತಾ ಕ್ರಮವಾಗಿ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಅವರು ತಾತ್ಕಾಲಿಕವಾಗಿ ಭಾರಿ ವಾಹನಗಳ ಸಂಚಾರವನ್ನು ನಿಷೇಧಿಸುವ ಆದೇಶ ಹೊರಡಿಸಿದ್ದಾರೆ. ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ-52 ರಲ್ಲಿ, 42.10 ರಿಂದ 42.20 ಕಿಮೀ ನಡುವಿನ ಹೇರ್ಪಿನ್ ತಿರುವಿನಲ್ಲಿ ಈ ಕುಸಿತ ಸಂಭವಿಸಿದ್ದು, ಈ ಭಾಗದಲ್ಲಿ ಹಿಂದೆ ಮಳೆಯ ಕಾರಣದಿಂದ ರಸ್ತೆ ಅಡಿಯಲ್ಲಿ ಮಣ್ಣು ಕುಸಿದಿತ್ತು. ಪ್ರಸ್ತುತ ಮಳೆ ಮರುಚುರುಕುಗೊಂಡಿರುವುದರಿಂದ ಮತ್ತೆ ಮಣ್ಣು ಕುಸಿಯುವ ಸಾಧ್ಯತೆ ಇದ್ದು, ತಾತ್ಕಾಲಿಕ ದುರಸ್ತಿಯ ಕೆಲಸ ನಡೆಯುತ್ತಿದೆ. ಇದರ ಬೆನ್ನಲ್ಲೇ, ತೀರ್ಥಹಳ್ಳಿ-ಕುಂದಾಪುರ ಮಾರ್ಗದಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ವಿಧಿಸಲಾಗಿದೆ. ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ವರದಿಗಳ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಪರ್ಯಾಯ ಮಾರ್ಗಗಳ ಮೂಲಕ ಭಾರಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ತೀರ್ಥಹಳ್ಳಿಯಿಂದ ಕುಂದಾಪುರ ಕಡೆಗೆ ಹೋಗುವ ವಾಹನಗಳು ತೀರ್ಥಹಳ್ಳಿ-ರಾವ್-ಕಾನುಗೋಡು-ನಗರ-ಕೊಲ್ಲೂರು-ಕುಂದಾಪುರ ಮಾರ್ಗದಲ್ಲಿ, ತೀರ್ಥಹಳ್ಳಿ-ಯಡೂರು-ಮಾಸ್ತಿಕಟ್ಟೆ-ಕಾನುಗೋಡು-ನಗರ-ಕೊಲ್ಲೂರು-ಕುಂದಾಪುರ ಮಾರ್ಗದಲ್ಲಿ ಅಥವಾ ಶಿವಮೊಗ್ಗ/ಸಾಗರದಿಂದ ಹೊಸನಗರ ಮಾರ್ಗವಾಗಿ ಹೊನ್ನಾವರ-ಭಟ್ಕಳ-ಬೈಂದೂರು-ಕುಂದಾಪುರ ರಾಷ್ಟ್ರೀಯ ಹೆದ್ದಾರಿ ಮೂಲಕ ಸಂಚರಿಸಬಹುದು. ಲೊಕೋಪಯೋಗಿ ಇಲಾಖೆ ಈ ಬದಲಾಯಿತ ಮಾರ್ಗಗಳ ಕುರಿತು ಅಧಿಸೂಚನೆ ನೀಡಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.