ಮಾರ್ಚ್ ಕೊನೆ.. ಇದು ಅನೇಕರ ಬದುಕಿನಲ್ಲಿ ತಿರುವು ಕೊಡುವ ತಿಂಗಳು. ಕಾಲೇಜು ಮುಗಿಸಿದವರಿಗೆ, ಹೈಸ್ಕೂಲ್ ಮುಗಿಸಿದವರಿಗೆ ಈ ತಿಂಗಳು ಕವಲುದಾರಿಗೆ ತಂದು ನಿಲ್ಲಿಸಿ ಬಿಡುತ್ತದೆ. ಇಷ್ಟು ವರ್ಷದಿಂದ ಪಕ್ಕದಲ್ಲಿಯೇ ಇರುತ್ತಿದ್ದ ಗೆಳತಿ ದೂರಾಗುತ್ತಾಳೆ.
ಎರಡು ದಂ ಸಿಗರೇಟು ಶೇರ್ ಮಾಡಿಕೊಳ್ಳುತ್ತಿದ್ದ ಫ್ರೆಂಡ್ ಇನ್ನೆಲ್ಲೋ ಹೊರಟು ಬಿಡುತ್ತಾನೆ. ನಮ್ಮ ಬದುಕು ನಾಳೆ ಇನ್ನೆಲ್ಲೋ ಅರಳಿಕೊಳ್ಳುತ್ತದೆ. ಹೆಚ್ಚಿನ ಓದು, ದುಡಿಮೆಗಾಗಿಯೋ ನಾವು ನಮ್ಮದಲ್ಲದ ಜಾಗದಲ್ಲಿ ನೆಲೆಯೂರಿ ನಿಲ್ಲಬೇಕು. ಒಂದೆರಡು
ತಿಂಗಳಿನಲ್ಲಿ ನಾವು ಅಡ್ಜಸ್ಟ್ ಆಗಿಬಿಡುತ್ತೇವೆ. ಅಲ್ಲಿನ ನೀರು, ರೂಮು, ಗೆಳಯ/ಗೆಳತಿಯರ ಪರಿಚಯವಾಗಿ ಬಿಡುತ್ತೆ. ಅದು ಸಹಜವು ಹೌದು. ನಾನು ಹೇಳೋಕೆ ಹೊರಟ ವಿಷಯ ಏನು ಅಂದ್ರೆ ನೀವೀಗ ಸ್ವತಂತ್ರರು, ದೂರದ ಊರು. ಪರಿಚಿತರು,
ಬಂಧುಗಳು ಯಾರು ನಿಮ್ಮನ್ನು ಗಮನಿಸುತ್ತಿಲ್ಲ ನೀವು ಆಡಿದ್ದೇ ಆಟ. ಯಾರಾದ್ರು ನೋಡಿ ಮನೆಗೆ ಹೇಳಿಬಿಟ್ರೆ ಅನ್ನೋ ಭಯವಿಲ್ಲ. ನೀನು ಹೀಗೆ ಮಾಡಿದ್ದು ತಪ್ಪು ಅಂತ ಹೇಳೋರು ಯಾರು ಇಲ್ಲ. ಅದೆಲ್ಲದಕ್ಕಿಂತ ಹೆಚ್ಚಾಗಿ ನೀವು ದುಡಿಯೋಕೆ
ಶುರುಮಾಡಿದ್ದೀರಿ, ನಿಮ್ಮ ಖರ್ಚಿಗೆ ಯಾರ ಮುಂದೆನೂ ಕೈ ಚಾಚಬೇಕಾದ ಅಗತ್ಯವಿಲ್ಲ. ವೀಕೆಂಡ್ ಪಾರ್ಟಿ, ಡೇಟಿಂಗು, ಕಾಫಿಡೇ ಬೇಕಾದಂತೆ ಖರ್ಚು ಮಾಡಬಹುದು. ಬಿಂದಾಸ್ ಆಗಿ ಬದುಕ್ತೀನಿ ಅಂತ ಅಂದುಕೊಂಡು ಬಿಡುತ್ತೀರಿ. ಫೈನ್..! ಈ
ಊರಿನಲ್ಲಿ ರಾತ್ರಿ ನಿದ್ದೆ ಬಿಟ್ಟು ಓದಿ ಕೈ ತುಂಬಾ ಮಾರ್ಕ್ಸ್ಗಳಿಸಿಕೊಂಡು, ಅಷ್ಟು ದೊಡ್ಡ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದೀರಿ. ಸೋ.. ಎಂಜಾಯ್ ಈಗ ಮಾಡದೇ ಮತ್ತೆ ಯಾವಾಗ ಮಾಡಬೇಕು ಅನ್ನೋದು ನಿಮ್ಮ ಧೋರಣೆ. ಎಂತಹ ದುರಂತ
ನೋಡಿ! ನೀವು ಓದಿಕೊಂಡು ಕಲಿತ ಇಂಗ್ಲೀಷ್ಗೆ ಸರ್ಟಿಫಿಕೇಟು ಕೊಟ್ಟು, ಅದರ ಕಿಮ್ಮತ್ತಿಗೆ ನಿಮಗೊಂದು ಡಿಸಿಗ್ನೇಷನ್ ಅಂತ ನಿಮ್ಮ ಕಂಪನಿ ಕೊಟ್ಟಿರುತ್ತದೆ. ಅಲ್ಲ! ನಿಮಗೆ ಹುಟ್ಟಿದಲ್ಲಿನಿಂದ ಒಂದು ಸಂಸ್ಕಾರ, ನಯ-ವಿನಯ ಅಂತ ಕಲಿಸಿದ ಅಪ್ಪ
ಅಮ್ಮಂದಿರು ನಿಮ್ಗೆ ಯಾವ ಸರ್ಟಿಫಿಕೇಟು ಕೊಡಲಿಲ್ಲ! ಅದನ್ನು ನಿಮ್ಮ ಕಂಪನಿ ಕೇಳುವುದೂ ಇಲ್ಲ! ತುಂಬಾ ದುಃಖದ ಸಂಗತಿ ಎಂದರೆ ಬಹಳಷ್ಟು ಜನ ಅಪ್ಪ ಅಮ್ಮ ಕಲಿಸಿದ ಸಂಸ್ಕಾರವನ್ನು ಮನೆಯಲ್ಲಿಯೇ ಬಿಟ್ಟು ಹೋಗಿ ಬಿಡುತ್ತಾರೆ! ಸುಮ್ನೆ ನಿಮ್ಮ
ಮನೆಯಲ್ಲಿ ಕೇಳಿ ನೋಡಿ. ನಾನು ಈ ಬಾರಿ ಫೇಲ್ ಆದ್ರೆ ನಿಮ್ಗೆ ಬೇಜಾರಾಗುತ್ತೋ ಅಥವಾ ನಾನು ಸರಿ ಇಲ್ಲ ಅಂತ ಯಾರಾದ್ರು ಹೇಳಿದ್ರೆ ಬೇಜಾರಾಗುತ್ತೋ ಅಂತ… ಆಗ ನಿಮ್ಮಿಂದ ಅವರೇನು ನಿರೀಕ್ಷೆ ಮಾಡ್ತಾ ಇದ್ದಾರೆಂಬುದು ನಿಮ್ಗೆ ಅರ್ಥವಾಗುತ್ತೆ!
ಇದರ ಜೊತೆಗೆ ನೀವು ಈ ಬೆಂಗಳೂರಿಗೆ ಉದ್ಯೋಗಕ್ಕೆ ಅಂತ ಹೋದವರು ರಜಾ ಸಮಯದಲ್ಲಿ ಬಂದಾಗ ಅವರಾಡೋ ಮಾತನ್ನ ಗಮನಿಸಿ ನೋಡಿ. ಮಾತಿಗೊಮ್ಮೆ ನಮ್ ಬೆಂಗ್ಳೂರಲ್ಲಿ ಹೆಂಗೆ ಅಂದ್ರೆ…. ಅಂತ ಶುರು ಮಾಡುತ್ತಾರೆ. ಅದೇನು ನಾವು
ನೋಡದ ಬೆಂಗ್ಳೂರೆನೋ ಎಂಬಂತೆ ಮಾತಾಡುತ್ತಿರುತ್ತಾರೆ. ನಾವು ಅಂಬೆಗಾಲಿಟ್ಟು ಬೆಳೆದ ಮಣ್ಣಿನ ಬಗ್ಗೆ ತಾತ್ಸಾರದಿಂದ ಮಾತಾಡಿದರೆ ನಾವು ಗ್ರೇಟ್ ಅಂತ ಅನಿಸಿಕೊಳ್ಳಲ್ಲ. ವಿದ್ಯೆ ವಿನಯವನ್ನು ತಂದು ಕೊಡಬೇಕು ನೀವು ಗಳಿಸಿದ ರ್ಯಾಂಕಿಗೆ ನಿಮ್ಮ ಕೈಯಲ್ಲಿ
ಸರ್ಟಿಫಿಕೇಟ್ ಇರುತ್ತೆ. ಆದರೆ ನಿಮ್ಮ ಗುಣ, ನಡತೆ, ವಿನಯಕ್ಕೆ ನೀವು ಬದುಕುವ ರೀತಿ ಮತ್ತು ಆಡುವ ಮಾತೇ ಸರ್ಟಿಫಿಕೇಟ್! ಯಾರಿಗೂ ಗೊತ್ತಾಗಲ್ಲ ಅಂತ ಒಂದು ಪೆಗ್ಗಿಗೆ ಕೈಚಾಚೋ ಹುಡುಗನಿಗೆ ಎಂಜಾಯ್ ಮಾಡ್ಬೇಕು ಅಂತ ಒಂದಿಬ್ಬರು ಬಾಯ್
ಫ್ರೆಂಡ್ಸ್ ಇಟ್ಟುಕೊಂಡಿರೋ ಹುಡುಗಿಗೆ ಗೊತ್ತಿರಲಿ, ನಾಳೆ ಆತ್ಮಸಾಕ್ಷಿಯ ಎದಿರು ಉತ್ತರಿಸೋ ಸಂದರ್ಭ ಬಂದಾಗ ನಾನು ತಡವರಿಸಬಾರದು ಎಂದು…… ಅಲ್ವಾ ಫ್ರೆಂಡ್ಸ್?
