ನನ್ನ ಮಗಳಿಗೆ ಒಂದು ಸೆಟ್ಲ್ಮೆಂಟ್ ಬಂದಿದೆ ಅಂದರು ಅವರು. ಹುಡುಗ ಬೆಂಗಳೂರಲ್ಲಿರೋದು… ಇಂಜಿನಿಯರ್, ಕಾರಿದೆ, ಅಲ್ಲೇ ಮನೆ ಇದೆ, ಸೈಟ್ ತಗೊಂಡಿದಾನೆ ಪರ್ವಾಗಿಲ್ಲ.. ಇಂತಹ ಮಾತುಗಳನ್ನು ನೀವು ಕೇಳಿರ್ತೀರಿ ಅಲ್ವಾ? ತುಂಬಾ ಸಲ ಹೆಣ್ಣು ಹೆತ್ತವರು ಒಂದು ತಪ್ಪು ಕಲ್ಪನೆಗೆ ಬಿದ್ದು ಬಿಡುತ್ತಾರೆ. ಕಾರು, ಬಂಗಲೆ, ದೊಡ್ಡ ನೌಕರಿ ಇರೋ ಹುಡುಗನಿಗೆ ನಮ್ಮ ಮಗಳನ್ನು ಕೊಟ್ರೆ ಸಂತೋಷವಾಗಿರ್ತಾಳೆ ಅಂತ ಅಂದುಕೊಂಡಿರುತ್ತಾರೆ. ಇನ್ನು ಕೆಲವು ಸಂದರ್ಭಗಳಲ್ಲಿ ದೊಡ್ಡಸ್ತಿಕೆಯ ಸಂಬಂಧ ಪ್ರತಿಷ್ಠೆಯ ಸಂಕೇತವಾಗಿರುತ್ತದೆ. ನಿಜ, ನೀವು ಹಾಗಂದುಕೊಂಡ್ರೆ ತಪ್ಪಲ್ಲ. ನನ್ನ ಮಗಳು ಸುಖವಾಗಿರಲಿ ಎಂಬ ಆಶಯ ಪ್ರತಿಯೊಬ್ಬ ತಂದೆ-ತಾಯಿಗೂ ಇರುತ್ತದೆ. ನನಗಿಂತ ಹಿರಿಯರು ನೀವು, ಒಂದು ನಿಮಿಷ ಯೋಚಿಸಿ… ಸುಖ ಅಂದ್ರೆ ಶ್ರೀಮಂತಿಕೆಯ ಸಂಕೇತವಾ? ಹಾಗಾದ್ರೆ ಬಡವರಿಗೆ ಸುಖ ಇರುವುದಿಲ್ವಾ? ನನ್ನ ದೃಷ್ಠೀಲಿ ಸುಖ ಸಂಸಾರ ಅಂದ್ರೆ ದೊಡ್ಡ ಸಂಬಳ, ಬಂಗಲೆ, ಕಾರು ಇವುಗಳೊಂದಿಗೆ ಬದುಕುವುದಲ್ಲ! ಒಂದೇ ಎಲೆಯಲ್ಲಿ ಗಂಡ-ಹೆಂಡತಿ ಒಬ್ಬರಿಗೊಬ್ಬರು ತುತ್ತು ತಿನ್ನಿಸುತ್ತಾ, ಪ್ರೀತಿಯಿಂದ ಒಬ್ಬರಿಗೊಬ್ಬರು ನಗುನಗುತ್ತಾ, ಮಾತಾಡಿಕೊಂಡು ನೆಮ್ಮದಿಯಿಂದ ಬದುಕುವುದಿದೆಯಲ್ಲ ಅದು ನಿಜವಾದ ಸುಖ. ಕಂಪ್ಯೂಟರಿನ ಮುಂದೆ ಕುಳಿತ ಗಂಡನಿಗೆ ಕಾಫಿ ತಗೊಂಡು ಹೋಗೋದು ಚೆಂದವಾ? ಅಥವಾ ಅಡುಗೆ ಮನೆಗೆ ನುಗ್ಗಿ, ಹೆಂಡತಿ ಪಕ್ಕದಲ್ಲಿ ಕುಳಿತು ಕಾಫಿ ಕುಡಿಯುವ ಗಂಡ ಇಷ್ಟವಾಗುತ್ತಾನಾ? ..ಬಡತನದಲ್ಲಿದ್ದವರಿಗೆ ಶ್ರೀಮಂತಿಕೆಯ ಬಯಕೆಗಳಿರುತ್ತವೆ ನಿಜ. ಪ್ರಸ್ತುತ ಸಮಾಜದಲ್ಲಿ ನನ್ನ ಮಗಳು ಸುಖವಾಗಿರಲಿ ಎಂದು ಶ್ರೀಮಂತ ಸಂಬಂಧ ಹುಡುಕುವವರಿಗಿಂತ ಶ್ರೀಮಂತ ಸಂಬಂಧ ಕುದುರಿಸುವುದು ತಮ್ಮ ಪ್ರತಿಷ್ಠೆಯನ್ನಾಗಿ ಭಾವಿಸುವ ತಂದೆ-ತಾಯಿಗಳೇ ಹೆಚ್ಚಾಗಿದ್ದಾರೆ. ನಾನು ಇದನ್ನು ಸುಮ್ನೆ ಹೇಳುತ್ತಿಲ್ಲ. ಈಗಾಗಲೇ ಮದುವೆ ಮುಗಿಸಿದವರು ಆಡುವ ಮಾತುಗಳು ಹೇಗಿರುತ್ತೆ ನೋಡಿ, ನಿಮ್ಮ ಎರಡನೇ ಮಗಳಿಗೆ ಮದುವೆ ಆಯ್ತಾ ಅಂದ್ರೆ ‘ಹೋ.. ಆಯ್ತು ರೆವಿನ್ಯೂ ಮಿನಿಸ್ಟ್ರು ಮಗಂಗೆ ಕೊಟ್ಟಿದ್ದು’! ಅಂತಾರೆ. ಹೀಗೆ ಹೇಳಿದ್ರೆ ಅದು ಪ್ರತಿಷ್ಠೆ ಅಲ್ವಾ? ಅಲ್ಲಿ ಹುಡುಗ ಮುಖ್ಯ ಅಲ್ಲ. ಅವರಪ್ಪ ಮಿನಿಸ್ಟ್ರು ಅನ್ನೋದೆ ಮುಖ್ಯವಾಗಿರುತ್ತದೆ. ಬಿಡಿ, ಇದು ಸರಿಹೋಗುವಂತದ್ದಲ್ಲ. ಆದರೆ ದುಃಖದ ಸಂಗತಿ ಏನು ಗೊತ್ತಾ? ಒಂದು ಸಂಬಂಧ ಬಂದಾಗ ನಮ್ಮ ಹೆಣ್ಣು ಮಕ್ಕಳು ತೆಗೆದುಕೊಳ್ಳುವ ನಿರ್ಧಾರಗಳಿವೆಯಲ್ಲ, ಅದು ನಿಜಕ್ಕೂ ಮೂರ್ಖತನದ ಪರಮಾವಧಿ ಎನಿಸಿಕೊಳ್ಳುತ್ತದೆ. ನಾನು ಒಪ್ಪಿಕೊಳ್ಳದಿದ್ರೆ ಅಪ್ಪ ಅಮ್ಮನಿಗೆ ಬೇಜಾರಾಗುತ್ತದೆ ಎಂಬ ಕಾರಣಕ್ಕೆ, ಬಹಳಷ್ಟು ಜನ ಹೆಣ್ಣು ಮಕ್ಕಳು ಇಷ್ಟವಿಲ್ಲದಿದ್ದರು ಒಲ್ಲದ ಗಂಡ ಕಟ್ಟುವ ತಾಳಿಗೆ ಕತ್ತು ಒಡ್ಡಿ ಬಿಡುತ್ತಾರೆ! ನನ್ ಹಣೆಬರಹ ಇಷ್ಟೆ ಎಂಬ ಸ್ಪಷ್ಟೀಕರಣ ಬೇರೆ! ಯಾಕ್ರೆ ಹುಡ್ಗೀರ್ರೆ ಹೀಗ್ಮಾಡ್ತೀರಾ? ನಿಮ್ಮ ಬದುಕು ನೀವೇ ನಿರ್ಧರಿಸಿ. ಅಪ್ಪ ಅಮ್ಮನಿಗೆ ನೋಯಿಸಿ ಅಂತ ನಾನು ಹೇಳ್ತಿಲ್ಲ. ಆದ್ರೆ ಅವರಿಗಿಂತ ಜಾಸ್ತಿ ಕಾಲ ಬದುಕಬೇಕಾದವರು ನೀವು. ನಿಮ್ಮ ಸಂಗಾತಿಯ ಆಯ್ಕೆ ನೀವೇ ಮಾಡ್ಕೊಳ್ಳಿ ಈ ಹುಡುಗ ಸರಿ ಬರಲ್ಲ ಅಂತ ಅನಿಸಿದ್ರೆ ಅದೆಂಥ ಒತ್ತಡ, ಆಮೀಷಗಳಿದ್ದರು ಖಡಾ ಖಂಡಿತವಾಗಿ ತಿರಸ್ಕರಿಸಿ ಬಿಡಿ. ಅದ್ಕೆ ಅಲ್ವಾ ಬಾಲ್ಯ ವಿವಾಹ ಪದ್ದತಿನ ನಿಷೇದಿಸಿದ್ದು! ಮೈ ತುಂಬಾ ಒಡವೆ, ದುಬಾರಿ ಬಟ್ಟೆ, ಇವೆಲ್ಲ ಪಾರ್ಟಿಗೋ ಸಮಾರಂಭಕ್ಕೆ ಮಾತ್ರ ಸೀಮಿತವಾಗಿರುತ್ತೆ. ಅಪ್ಪ-ಅಮ್ಮನ ಪ್ರೀತಿ, ತಮ್ಮ-ತಂಗಿಯರ ಅಕ್ಕರೆ, ತವರಿನ ಸೆಳೆತಕ್ಕೆ ಸಿಕ್ಕ ಹುಡುಗಿಗೆ ಬೇಕಾಗುವುದು ದೊಡ್ಡ ಬಂಗಲೆಯಲ್ಲ, ಶ್ರೀಮಂತಿಕೆಯಲ್ಲ, ಬದುಕಿನ ಕೊನೆತನಕ ಪ್ರೀತಿಯಿಂದ ಸಲಹುವ ಹೃದಯ ಶ್ರೀಮಂತಿಕೆವುಳ್ಳ ಹುಡುಗ! ನಿಮ್ಮ ಮಗಳನ್ನು ಇಂತಹ ಹುಡುಗನಿಗೆ ಒಪ್ಪಿಸಿ. ಕಾರು, ಬಂಗಲೆ, ದೊಡ್ಡ ಸಂಬಳದ ರೋಬೋಗೆ ಬೇಡ.
