ಅದನ್ನು ಲೂಸ್ ಟಾಕ್ ಅಂತೀವಿ… ಕೆಲವರು ಇರುತ್ತಾರೆ, ನಮ್ಮದೇ ಒಂದು ಗುಂಪಿರುತ್ತಲ್ವಾ ಅಲ್ಲಿ ಅವರ ಮಾತು ಮಜ ಕೊಡುತ್ತೆ. ನಾವೇ ನಾಲ್ಕು ಜನ ಮಾತಾಡೋವಾಗ ಒಬ್ಬರನೊಬ್ಬರು ಬೈದುಕೊಳ್ಳೋದು, ಕಾಲೆಳೆದುಕೊಳ್ಳೊದು, ಆಡಿಕೊಂಡು ನಗೋದು ಎಲ್ಲವು ಸಹಜ ಮತ್ತು ನಾವದನ್ನು ಎಂಜಾಯ್ ಮಾಡ್ತೀವಿ. ನಮ್ಮದೇ ಭಾಷೇಲಿ ಹೇಳ್ಬೇಕಂದ್ರೆ ಹಡೆ ಮಾಡೋದು ಅಂತಾರಲ್ಲ ಅದು. ಒಬ್ಬರನ್ನೊಬ್ಬರು ಗೇಲಿ ಮಾಡೋದು, ಆಡಿಕೊಂಡು ನಗೋದು, ಇವೆಲ್ಲ ಫ್ರೆಂಡ್ಶಿಪ್ನಲ್ಲಿ ಇದ್ದಿದ್ದೆ ಬಿಡಿ. ಆದರೆ, ನಿಮ್ಮ ಗುಂಪಿನ ಪ್ರತಿಯೊಬ್ಬನಿಗೂ ಅವನದೇ ಆದ ವ್ಯಕ್ತಿತ್ವವಿರುತ್ತದೆ, ಘನತೆ ಇರುತ್ತದೆ. ನೀವು ಮಾಡುವ ಗೇಲಿ ಅದಕ್ಕೆ ದಕ್ಕೆ ಆಗಬಾರದು ನಿಮ್ಮ ತಮಾಷೆಗಳಿಗೆ, ಆಡುವ ಮಾತುಗಳಿಗೆ ಒಂದು ಚೌಕಟ್ಟಿರಬೇಕು. ಏನೇ ಗೆಳೆತನ, ಭಾಂದವ್ಯ ಹೇಗೆ ಇದ್ದರು ನಾಲ್ಕು ಜನರ ಮುಂದೆ ನಿಮ್ಮ ಗೆಳೆಯನ ವರ್ಚಸ್ಸಿಗೆ, ಸ್ಥಾನಕ್ಕೆ ಘಾಸಿ ಮಾಡುವಷ್ಟು ಸಲಿಗೆ ಇಟ್ಟುಕೊಳ್ಳಬೇಡಿ. ಇದರಿಂದ ಆತನಿಗೆ ‘ಅಲ್ಪರ ಸಂಗ ಅಭಿಮಾನ ಭಂಗ’ ಎಂಬ ಗಿಲ್ಟ್ ಬರುವಂತೆ ಮಾಡಿ ನೀವು ಅಲ್ಪರಾಗಬೇಡಿ. ಸುಮ್ನೆ ಗಮನಿಸಿ ನೋಡಿ, ಈ ಲೂಸ್ ಟಾಕ್ ಮಾತಾಡುವವರು ಹೆಚ್ಚಿನ ಸಲ ಒಳ್ಳೆಯ ಮಾತುಗಾರರಾಗಿರುತ್ತಾರೆ. ಕೆಲವರು ಉನ್ನತ ಹುದ್ದೆಗಳಲ್ಲಿಯೂ ಇರುತ್ತಾರೆ. ಕಾಲೇಜಿನಲ್ಲಿ ಉಪನ್ಯಾಸಕರು, ಭಾಷಣಕಾರರು ಹೀಗೆ ನಾಲ್ಕು ಜನ ಇವರು ಮಾತು ಕೇಳುತ್ತಾರೆ ಅಂತ ಅನಿಸಿದ್ರೆ ಸಾಕು, ಮನಸೋ ಇಚ್ಛೆ ನಾಲಗೆಯನ್ನು ಹರಿಬಿಡುತ್ತಾರೆ. ನಾವೇನ್ ಹೇಳಿದ್ರು ಕೇಳ್ತಾರೆ ಎಂಬ ಭ್ರಮೆಗೆ ಬಿದ್ದು ಬಿಡುತ್ತಾರೆ. ಅಪಾಯ ಇರೋದು ಅಲ್ಲಿ. ಯಾರು ನಮ್ಮ ಮಾತು ಕೇಳೋಕೆ ಇಷ್ಟಪಡುತ್ತಿದ್ದರೋ, ಅವರೇ ನಮ್ಮ ಮಾತನ್ನು ಅಸಹ್ಯ ಪಟ್ಟುಕೊಳ್ಳೊ ಹಾಗಾಗುತ್ತೆ, ನಮ್ಮ ಭಾಷೆಯ ಮೇಲೆ ಹಿಡಿತ ಇಟ್ಟುಕೊಳ್ಳದಿದ್ದರೆ, ಯಾರ ಮುಂದೆ ಹೇಗೆ ಮಾತಾಡಬೇಕೆಂದು ಪರಿಜ್ಞಾನ ಇಲ್ಲದಿದ್ದರೆ ಖಂಡಿತ ನಮ್ಮ ವ್ಯಕ್ತಿತ್ವವನ್ನು ನಾವೇ ಹಾಳು ಮಾಡಿಕೊಂಡಂತಾಗುತ್ತದೆ. ಇತ್ತೀಚೆಗೆ ಉಪನ್ಯಾಸಕರೊಬ್ಬರು ತಮ್ಮ ಅನುಭವ ಹೇಳುತ್ತಿದ್ದರು, ಡಿಗ್ರಿಯ ಕ್ಲಾಸಿನಲ್ಲಿ ತೇಜಸ್ವಿಯವರು ಬರೆದ ಕತೆಯೊಂದನ್ನು ಪಾಠವಾಗಿರಿಸಿದ್ದಾರೆ, ಸಾಧಾರಣವಾಗಿ ತೇಜಸ್ವಿಯವರು ಬರೆದಿರುವ ಪುಸ್ತಕಗಳಲ್ಲಿ ಉದಾ: ಕಿರಗೂರಿನ ಗಯ್ಯಾಳಿಗಳು, ನಮ್ಮ ಲೋಕ, ಪಾಕಕ್ರಾಂತಿ ಮುಂತಾದ ಪುಸ್ತಕಗಳಲ್ಲಿ ಹೆಂಗಸರ ಅಂಗಾರಕಗಳನ್ನು ತಮ್ಮದೇ ಆದ ಭಾಷಾ ಪ್ರಯೋಗದ ಮೂಲಕ ಹೇಳಿದ್ದಾರೆ. ನಿಜ ಅದನ್ನು ಬೇರೆಯವರ ಮುಂದೆ ಹೇಳುವುದಕ್ಕೆ ಮುಜುಗರವಾಗುತ್ತದೆ. ಇಂಥದ್ದನ್ನು ಕಾಲೇಜಿಗೆ ಪಾಠವಾಗಿರಿಸಿದಾಗ ಅದನ್ನು ಯಥಾವತ್ತಾಗಿ ವಿವರಿಸುವ ಉಪನ್ಯಾಸಕರನ್ನು ವಿದ್ಯಾರ್ಥಿಗಳು ಅಸಹ್ಯದಿಂದ ನೋಡುವುದಿಲ್ಲವೇ? ಹೌದು ನಿಜ, ಇಲ್ಲಿ ಉಪನ್ಯಾಸಕನಿಗೆ ಭಾಷಾ ಪರಿಜ್ಞಾನವಿರಬೇಕು. ಹೆಣ್ಣಿನ ದೇಹ ಸೌಂದರ್ಯದ ಬಗ್ಗೆ ಎಲ್ಲಾ ಸಾಹಿತಿಗಳು ಬರೆದಿದ್ದಾರೆ. ಕುವೆಂಪು, ತೇಜಸ್ವಿ, ಖುಷ್ವಂತ್ಸಿಂಗ್, ಲಂಕೇಶ್, ರವಿಬೆಳೆಗೆರೆ, ಕೌಂಡಿನ್ಯ ಹೀಗೆ ಸಾಕಷ್ಟು ಮಂದಿ ಅಂಗಾಂಗಗಳನ್ನು ವರ್ಣಿಸಿದ್ದಾರೆ. ಆದರೆ ಅಲ್ಲಿನ ಪದ ಪ್ರಯೋಗ ಭಾಷಾ ಹಿಡಿತವನ್ನು ನಾವು ಗಮನಿಸಬೇಕು. ನಾಲ್ಕು ಜನ ಹುಡುಗರ ಮುಂದೆ ಹೇಳಿದರೆ ತಪ್ಪಿಲ್ಲ. ಆದರೆ ಹೆಣ್ಣು ಮಕ್ಕಳಿಗೆ ಹೀಗೆ ಯಥಾವತ್ತಾಗಿ ವಿವರಿಸಿದರೆ, ಆ ಉಪನ್ಯಾಸಕ ಎಷ್ಟೇ ಚಂದ ಪಾಠ ಮಾಡಿದರು ಅವನು ಜೊಲ್ಲು ಪಾರ್ಟಿ ಅಂತನಿಸಿಬಿಡುತ್ತಾನೆ. ಯಾರೋ ಹೇಳಿದ್ದನ್ನು ಇನ್ಯಾರಿಗೋ ಹೇಳುವಾಗ ನಮ್ಮತನ ಅನಾವರಣಗೊಳ್ಳುತ್ತೆ ಅನ್ನೋದಕ್ಕೆ ಇದಕ್ಕಿಂತ ಉದಾಹರಣೆ ಬೇಕಾ? ನಾಲಿಗೆ ಬಗ್ಗೆ ಓವರ್ ಕಾನ್ಫಿಡೆನ್ಸ್ ಬೇಡ ಏನಾಂತೀರಾ…?
