ಕಡೂರು: ರೈತರ ಬೇಡಿಕೆಗಳನ್ನು ಪೂರೈಸುವಂತೆ ಡಿಸೆಂಬರ್ 10ರಂದು ಹಸಿರು ಸೇನೆಯ ನೇತೃತ್ವದಲ್ಲಿ ಸಾವಿರಾರು ರೈತರು ಜೊತೆಗೂಡಿ ಅಧಿವೇಶನ ನಡೆಯುತ್ತಿರುವ ಸುವರ್ಣಸೌಧದತ್ತ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ಮೆಕ್ಕೆಜೋಳ ಖರೀದಿ, ಕಬ್ಬಿಗೆ ಸೂಕ್ತ ಬೆಂಬಲ ಬೆಲೆ, ನೀರಾವರಿ ಯೋಜನೆಗಳ ಅನುಷ್ಠಾನ, ಮಳೆಯಿಂದಾದ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ಹೀಗೆ, ಅನೇಕ ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ಪ್ರತಿಭಟನೆ ಆರಂಭಿಸಲಿದ್ದು, ಪ್ರತಿಭಟನೆಗೆ ಸಂಬಂಧಿಸಿದಂತೆ ಪೊಲೀಸ್ ಹಾಗೂ ಸಂಬಂಧ ಪಟ್ಟವರ ಅನುಮತಿ ಪಡೆಯಲಾಗಿದೆ. ಸುವರ್ಣಸೌಧದ ಬಳಿ ಧರಣಿ ನಿರತರಿಗೆ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಸಂಘಟನೆಯು ಯುವ ಘಟಕದ ರಾಜ್ಯಾಧ್ಯಕ್ಷ ಫಯಾಜ್ ಮೈಸೂರು, ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
