ಬೆಂಗಳೂರು: 2026ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ–1ರ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪ್ರಕ್ರಿಯೆಗೆ ರಾಜ್ಯದಲ್ಲಿ ಸಜ್ಜಾಗಿದ್ದು, ಮೌಲ್ಯಮಾಪಕರಿಗೆ ಈ ಬಾರಿ ಸಿಹಿ ಸುದ್ದಿ ಸಿಕ್ಕಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮೌಲ್ಯಮಾಪಕರ ಗೌರವ ಸಂಭಾವನೆಯನ್ನು ಶೇ. 5ರಷ್ಟು ಹೆಚ್ಚಿಸಿದೆ. ಏಪ್ರಿಲ್ 8ರಿಂದ ರಾಜ್ಯದ 34 ಶೈಕ್ಷಣಿಕ ಜಿಲ್ಲೆಗಳ 262 ಕೇಂದ್ರಗಳಲ್ಲಿ ಏಕಕಾಲಕ್ಕೆ ಮೌಲ್ಯಮಾಪನ ಕಾರ್ಯ ಆರಂಭವಾಗಲಿದ್ದು, ಉಪ ಮುಖ್ಯ ಮೌಲ್ಯಮಾಪಕರು ಏಪ್ರಿಲ್ 7ರಂದು ಹಾಗೂ ಸಹಾಯಕ ಮೌಲ್ಯಮಾಪಕರು ಏಪ್ರಿಲ್ 8ರಂದು ಕೇಂದ್ರಗಳಿಗೆ ಹಾಜರಾಗಬೇಕು. ಹಿಂದಿ ಮತ್ತು ಸಂಸ್ಕೃತ ಸೇರಿದಂತೆ ತೃತೀಯ ಭಾಷೆಗಳ ಮೌಲ್ಯಮಾಪನ ಏಪ್ರಿಲ್ 9ರಿಂದ ಪ್ರಾರಂಭವಾಗುತ್ತದೆ. ಮೌಲ್ಯಮಾಪನ ಕಾರ್ಯ ಪೂರ್ಣಗೊಳಿಸಲು ಏಪ್ರಿಲ್ 18ರವರೆಗೆ ಗಡುವು ನೀಡಲಾಗಿದ್ದು, ಪ್ರಕ್ರಿಯೆ ಮುಗಿದ ನಂತರವೇ ಫಲಿತಾಂಶ ಪ್ರಕಟವಾಗಲಿದೆ ಎಂದು ಮಂಡಳಿ ನಿರ್ದೇಶಕ ಗೋಪಾಲಕೃಷ್ಣ ಹೆಚ್.ಎನ್. ತಿಳಿಸಿದ್ದಾರೆ. ಈ ನಡುವೆ ವಿವಿಧ ಹುದ್ದೆಗಳ ಸಂಭಾವನೆಯಲ್ಲಿ ಹೆಚ್ಚಳ ಮಾಡಲಾಗಿದೆ.
