
ಮಂಗಳೂರು: ತುಳು ಅಕಾಡೆಮಿಯ ಮಾಜಿ ಅಧ್ಯಕ್ಷ ದಯಾನಂದ ಕತ್ತಲ್ಸಾರ್ ದಕ್ಷಿಣ ಕನ್ನಡ ಜಿಲ್ಲೆಯ ಹೆಸರನ್ನು ಮಂಗಳೂರು ಜಿಲ್ಲೆ ಎಂದು ಬದಲಾಯಿಸಲು ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಹೇಳಿದ್ದಾರೆ. ವಿಜಯ ನಗರ ಅರಸರ ಕಾಲದಿಂದಲೂ ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಗೆ ಇದ್ದ ಐತಿಹಾಸಿಕ ಹೆಸರು ಮಂಗಳೂರು ರಾಜ್ಯವಾಗಿತ್ತು. ಮಂಗಳೂರು ಹೆಸರನ್ನು ಇಡೀ ಜಿಲ್ಲೆಗೆ ಇಡಬೇಕೆಂದು ಪಕ್ಷಾತೀತವಾಗಿ ರಾಜಕಾರಣಿಗಳು ಸಾಮಾಜಿಕ ಚಿಂತಕರು, ತುಳುವರು ಮತ್ತು ಧಾರ್ಮಿಕ ಮುಖಂಡರ ಬೇಡಿಕೆಯಾಗಿದೆ.
ಮುಂದಿನ ದಿನಗಳಲ್ಲಿ ಉಸ್ತುವಾರಿ ಸಚಿವರನ್ನು, ಶಾಸಕರನ್ನು, ವಿಧಾನ ಪರಿಷತ್ ಸದಸ್ಯರನ್ನು ಭೇಟಿಯಾಗುವ ಜತೆಗೆ ಮುಖ್ಯಮಂತ್ರಿಯ ಗಮನಕ್ಕೂ ತರುವ ಕಾರ್ಯವನ್ನು ಮಾಡುತ್ತೇವೆ. ಇದರಲ್ಲಿ ಯಾವುದೇ ರಾಜಕೀಯ, ಜಾತಿಧರ್ಮ, ಜನಾಂಗ ಸೇರಿದಂತೆ ಯಾವುದೇ ರೀತಿಯ ಗೊಂದಲವಿಲ್ಲದೇ ಹಕ್ಕೊತ್ತಾಯವನ್ನು ಮಂಡಿಸಲಾಗುತ್ತದೆ ಎಂದರು. ಜಿಲ್ಲೆಯ ಜನಪ್ರತಿನಿಧಿಗಳು, ಜನರ ಅಭಿಪ್ರಾಯದ ಜೊತೆಗೆ ರಂಗಭೂಮಿ, ತುಳು ಚಿತ್ರ ಕಲಾವಿದರ ಅಭಿಪ್ರಾಯವನ್ನು ಪಡೆದುಕೊಂಡು ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುವ ಕಾರ್ಯ ಮಾಡಲಾಗುತ್ತದೆ ಎಂದರು.
ಮಂಗಳೂರು ತಾಲ್ಲೂಕು ಇಗಾಗಲೇ ಇರುವುದರಿಂದ ಈ ಹೆಸರನ್ನು ಜಿಲ್ಲೆಗೆ ಇಡುವುದರಿಂದ ಕಾನೂನಾತ್ಮಕ ತೊಡುಕಿಗೆ ಸಮಸ್ಯೆಯಾಗುವುದಿಲ್ಲ. ಜಿಲ್ಲೆಯ ಶಾಸಕರು, ಸಂಸದರು, ಎಮ್.ಎಲ್.ಸಿಗಳು ಮಂಗಳೂರು ಹೆಸರಿನ ಕುರಿತು ಒಲವು ತೋರಿಸಿದ್ದಾರೆ ಎನ್ನಲಾಗಿದೆ. ಮಂಗಳೂರು ಬ್ರ್ಯಾಂಡ್ ಮುಂದೆ ಉದ್ದಿಮೆಗಳು, ಐಟಿ ಕಂಪನಿಗಳು ಮತ್ತು ಇತರ ಯೋಜನೆಗೆ ಸಹಕಾರಿಆಗಲಿದೆ.
ಮಾಜಿ ಶಾಸಕ ಬಿ.ಎ ಮೊದ್ದೀನ್ ಬಾವಾ, ಮನಪಾ ಮಾಜಿ ಸದಸ್ಯ ಕಿರಣ್ ಕುಮಾರ್ ಕೋಡಿಕಲ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಕಸ್ತೂರಿ ಪಂಜ, ಯುವ ಜನತಾದಳ ಅಧ್ಯಕ್ಷ ಅಕ್ಷಿತ್ ಸುವರ್ಣ, ವಿಎಚ್ಪಿ ಯ ಪ್ರದೀಪ್ ಸರಿಪಲ್, ಪ್ರಮುಖರಾದ ರೋಶನ್, ರೊನಾಲ್ಡ್, ಶೈಲೇಶ್, ಪ್ರೇಮ್ನಾಥ್, ಉದಯ ಪುಂಜ, ಯೋಗೀಶ್ ಶೆಟ್ಟಿ, ರಾಜೇಶ್ ಆಳ್ವ, ಮಹೀ ಮೂಲ್ಕಿ, ಭರತ್ ಬಳ್ಳಾಲ್ ಭಾಗ್ ಇತರರು ಉಪಸ್ಥಿತರಿದ್ದರು.