
ದಕ್ಷಿಣ ಕನ್ನಡ: ಮುಂಬರುವ ದಿನಗಳಲ್ಲಿ ಹಬ್ಬಗಳು ಆರಂಭಗೊಳ್ಳುತ್ತವೆ. ಆದ್ದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೋಲಿಸರು ಸಂಭ್ರಮಾಚರಣೆಗೆ ಮಹತ್ವದ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದಾರೆ. ಮಂಗಳೂರು ಪೋಲಿಸ್ ಕಮಿಷನರ್ ಅನುಮತಿ ಇಲ್ಲದೇ ಯಾವುದೇ ಸಾರ್ವಜನಿಕ ಅಥವಾ ಖಾಸಗಿ ಕಾರ್ಯಕ್ರಮಗಳು, ಮೆರವಣಿಗೆಗಳು ನಡೆಯುವುದಿಲ್ಲ ಎಂದು ಘೋಷಣೆ ಮಾಡಲಾಗಿದೆ. ಕಾರ್ಯಕ್ರಮದ ಆಯೋಜಕರು ಕಡ್ಡಾಯವಾಗಿ ಪೋಲಿಸ್ ಅನುಮತಿ ಪಡೆಯಬೇಕು. ಇನ್ನು ಡಿಜೆ, ಧ್ವನಿವರ್ಧಕ ಬಳಕೆಗೆ ನಿರ್ಬಂಧ, ಸಿಸಿಟಿವಿ ಕಡ್ಡಾಯ, ದ್ವೇಷ ಭಾಷಣಕ್ಕೆ ನಿಷೇಧ ಹೇರಲಾಗಿದೆ. ನಿಯಮ ಉಲ್ಲಂಗಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೋಲಿಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ಸಾರ್ವಜನಿಕ ಶಾಂತಿ ಕಾಪಾಡಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅರುಣ್ ಕೆ ಅವರು ಹೇಳಿದ್ದಾರೆ.
ಷರತ್ತುಗಳ ಪಾಲನೆಗಾಗಿ ಆಯೋಜಕರು ಈ ಎಲ್ಲಾ ಷರತ್ತುಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಷರತ್ತುಗಳ ಪಾಲನೆಗಾಗಿ ಆಯೋಜಕರು ತಮ್ಮ ಪ್ರತಿನಿಧಿಗಳ ಹೆಸರು ಮತ್ತು ಸಂಪರ್ಕ ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಈ ವಿವರ ನೀಡದಿರುವ ಆಯೋಜಕರಿಗೆ ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗುವುದಿಲ್ಲ ಎಂದಿದ್ದಾರೆ. ರಾತ್ರಿ 11.30 ರ ಬಳಿಕ ಮೆರವಣಿಗೆ ಅವಕಾಶವಿರುವುದಿಲ್ಲ. ಜುಲೈ 6 ರಂದು ಮೊಹರಂ, ಆಗಸ್ಟ್ 16 ರಂದು ಶ್ರೀ ಕೃಷ್ಣ ಜನ್ಮಾಷ್ಟಮಿ, ಮೊಸರು ಕುಡಿಕೆ, ಆಗಸ್ಟ್ 27 ರಂದು ಗಣೇಶ್ ಚತುರ್ಥಿ ಹಾಗೂ ಸೆಪ್ಟೆಂಬರ್ 16 ರಂದು ಈದ್ಮಿಲಾದ್ ಹಿನ್ನಲೆಯಲ್ಲಿ ಈ ಮಾರ್ಗಸೂಚಿಯನ್ನು ನಗರ ಪೋಲಿಸ್ ಕಮೀಷನರ್ ಕಚೇರಿ ಬಿಡುಗಡೆಗೊಳಿಸಿದೆ. ಭದ್ರತೆಗಾಗಿ ಆಯೋಜಕರಿಂದ ಸ್ಥಳದಲ್ಲಿ ಭದ್ರತಾ ಸಿಬ್ಬಂದಿ ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಕಡ್ಡಾಯವಾಗಿ ಸೂಚಿಸಲಾಗಿದೆ.