
ದಕ್ಷಿಣ ಕನ್ನಡ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಗಾಲದ ತೊಂದರೆಯಿಂದಾಗಿ ಹೊಸ ಮರಳುಗಾರಿಕೆ ಆರಂಭವಾಗಿಲ್ಲ. ಹಳೆಯ ಟೆಂಡರ್ ಅವಧಿ ಮುಗಿದಿದ್ದು, ಹೊಸದಾಗಿ ಮರಳುಗಾರಿಕೆಯ ಟೆಂಡರ್ ಪಕ್ರಿಯೆ ಪೂರ್ಣಗೊಳ್ಳಲು ನಾಲ್ಕು ತಿಂಗಳು ಬೇಕಾಗಬಹುದು. ಇದರಿಂದಾಗಿ ಮರಳಿನ ಅಭಾವವು ಉಂಟಾಗಿ ನಿರ್ಮಾಣ ಕಾಮಗಾರಿಗಳಿಗೆ ತೊಂದರೆಯಾಗುವ ಸಾಧ್ಯತೆಯಿದೆ. ನಾನ್ಸಿಆರ್ಝಡ್ ವ್ಯಾಪ್ತಿಯ ೧೬ ಬ್ಲಾಕ್ಗಳು ಮಾತ್ರ ಪ್ರಸ್ತುತ ಪರವಾನಗಿ ಹೊಂದಿದ್ದು, ಇವುಗಳಿಂದ ತೆಗೆಯುವ ಮರಳು ಜಿಲ್ಲೆಯ ಕಾಮಗಾರಿಗೆ ಏನೇನು ಸಾಲದೆಂಬ ಅಭಿಪ್ರಾಯವಿರುವ ಕಾರಣ ಮರಳಿನ ಅಭಾವ ಈ ಭಾರಿ ದೊಡ್ಡ ಮಟ್ಟದ ಆರ್ಥಿಕ ಸಮಸ್ಯೆಗೆ ಕಾರಣವಾಗುವ ಭಯ ಮೂಡಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮರಳು ಯೂನಿಯನ್ನ ಅಧ್ಯಕ್ಷರಾದ ದಿನೇಶ್ ಮೆದು ರವರು ದಕ್ಷಿಣ ಕನ್ನಡದಲ್ಲಿ ಮರಳು ಸಂಪತ್ತು ಹೇರಳವಾಗಿದ್ದು, ಲಭ್ಯ ಮರಳನ್ನು ಪೂರ್ಣ ಪ್ರಮಾಣದಲ್ಲಿ ತೆಗೆಯಲು ಇಲಾಖೆ ಮುಂದಾಗಬೇಕು. ೫೦ಕ್ಕಿಂತಲೂ ಹೆಚ್ಚು ಹೊಸ ಬ್ಲಾಕ್ಗಳನ್ನು ಗುರುತಿಸಲು ಅವಕಾಶವಿದೆ. ಇದರಿಂದ ಅಕ್ರಮ ಮರಳುಗಾರಿಕೆ ನಿಂತು ಸರಕಾರಕ್ಕೆ ದೊಡ್ಡ ಮೊತ್ತದ ಆದಾಯ ಸಿಗುತ್ತದೆ. ಜನರಿಗೆ ಸುಲಭವಾಗಿ ಮರಳು ಸಿಗುತ್ತದೆ ಎಂದು ಹೇಳಿದ್ದಾರೆ.
ಮರಳುಗಾರಿಕೆ, ಕೆಂಪು ಕಲ್ಲುಗಣಿಗಾರಿಕೆ ಸ್ತಬ್ಧಗೊಂಡರೆ ಜಿಲ್ಲೆಯ ಆರ್ಥಿಕತೆಯ ಮೇಲೆ ಬಹು ದೊಡ್ಡ ಪ್ರಮಾಣದ ಹೊಡೆತ ಬಿದ್ದಂತಾಗುತ್ತದೆ. ಈ ಉದ್ಯಮ ನಡೆಸುವ ಉದ್ದಿಮೆಗಾರರಿಗೆ ಮಾತ್ರವಲ್ಲದೆ ಇಲ್ಲಿ ಕೆಲಸ ಮಾಡುವ ಕಾರ್ಮಿಕರು, ಲಾರಿ ಚಾಲಕರು ಕೆಲಸವಿಲ್ಲದೆ ಪರದಾಡುವಂತಾಗುತ್ತದೆ. ಮರಳು, ಕಲ್ಲು ಉದ್ಯಮ ರಾರಾಜಿಸಿದರೆ ಪರೋಕ್ಷವಾಗಿ ಹೋಟೆಲ್, ಅಂಗಡಿ ವ್ಯಾಪಾರ ವಹಿವಾಟು ಹೆಚ್ಚುತ್ತದೆ ಇಲ್ಲವಾದಲ್ಲಿ ಈ ಎಲ್ಲ ವಹಿವಾಟಿಗೆ ಹೊಡೆತ ಬೀಳುತ್ತದೆ. ಪುತ್ತೂರು ಸಹಾಯಕ ಆಯುಕ್ತರಾದ ಸ್ಟೆಲ್ಲಾವರ್ಗೀಸ್ ಸಂಪಾಜೆಯಲ್ಲಿ ಹೊಸ ಮರಳು ಬ್ಲಾಕ್ ಗುರುತಿಸಲು ಸೂಚಿಸಿದ್ದಾರೆ. ಅಲ್ಲಿ ಸಂಬಂಧಪಟ್ಟ ಇಲಾಖೆಗಳು ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲಿದ್ದಾರೆ. ಬಳಿಕ ಅದನ್ನು ಜಿಲ್ಲಾ ಸಮಿತಿಗೆ ಕಳುಹಿಸಿ ಕೊಡಲಾಗುತ್ತದೆ ಎಂದಿದ್ದಾರೆ.