ಬೆಂಗಳೂರು:ಸೈಬರ್ ಅಪರಾಧಗಳ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಸಹ ವಂಚನೆಯ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಸೈಬರ್ ಅಪರಾಧಗಳ ಕುರಿತ ರಾಷ್ಟ್ರೀಯ ಸಹಾಯವಾಣಿ ಸಂಖ್ಯೆ 1930 ಆರಂಭಿಸಲಾಗಿತ್ತು. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ವರ್ಷದಿಂದ ವರ್ಷಕ್ಕೆ ಸೈಬರ್ ಸಹಾಯವಾಣಿಗೆ ಬರುವ ಕರೆಗಳ ಸಂಖ್ಯೆ ದ್ವಿಗುಣವಾಗುತ್ತಿದ್ದು, 2025ರಲ್ಲಿ ಸುಮಾರು 24 ಲಕ್ಷ ಕರೆಗಳು ದಾಖಲಾಗಿರುವುದು ಪೊಲೀಸ್ ಇಲಾಖೆಯಿಂದ ತಿಳಿದುಬಂದಿದೆ. ”ಆನ್ಲೈನ್ ವಂಚನೆ, ಡಿಜಿಟಲ್ ಅರೆಸ್ಟ್, ಸೈಬರ್ ಅಪರಾಧಗಳು ಜರುಗಿದ (60 ರಿಂದ 90 ನಿಮಿಷ) ಗೋಲ್ಡನ್ ಅವರ್ನಲ್ಲಿ ದೂರು ದಾಖಲಿಸುವುದರಿಂದ ಬಾಧಿತರ ಬ್ಯಾಂಕ್ ಖಾತೆಗಳಲ್ಲಿರುವ ಹಣವನ್ನು ವಂಚಕರ ಕೈಗೆ ಸಿಗದಂತೆ ಉಳಿಸಲು ಕಾಲಾವಕಾಶ ಸಿಗಲಿದೆ. ದೂರು ನೀಡಲು ತಡಮಾಡಿದರೆ ವಂಚಕರ ಬಲೆಗೆ ಬೀಳುವ ಅಪಾಯ ಹೆಚ್ಚಾಗಿರಲಿದೆ,” ಎಂದು ಡಿಜಿಪಿ ಡಾ.ಎಂ.ಎ. ಸಲೀಂ ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ. ಸದ್ಯ ಸಹಾಯವಾಣಿಗೆ ಬರುವ ಕರೆಗಳ ಸಂಖ್ಯೆ ಏರಿಕೆ ಕಂಡರೂ, ಹಣ ಕಳೆದುಕೊಂಡವರಿಗೆ ಹಣ ಮರಳಿಸುವ ಕೆಲಸದಲ್ಲಿ ಸವಾಲುಗಳು ಎದುರಾಗುತ್ತಿವೆ. ”ಸೈಬರ್ ವಂಚನೆ ಪ್ರಕರಣವೊಂದರಲ್ಲಿ 2.2 ಕೋಟಿ ರೂ.ಗಳನ್ನು ಶೀಘ್ರ ರಿಕವರಿ ಮಾಡಲಾಯಿತು. ಅಪರಾಧ ನಡೆದ 20 ರಿಂದ 30 ನಿಮಿಷದ ಅವಧಿಯಲ್ಲಿ ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಿದ್ದರಿಂದ ಶೇ.100 ರಷ್ಟು ರಿಕವರಿ ಸಾಧ್ಯವಾಯಿತು,” ಎಂದು ಅಪರಾಧ ವಿಭಾಗದ ಡಿಸಿಪಿ ರಾಜಾ ಇಮಾಮ್ ಖಾಸಿಂ ಹೇಳಿದ್ದಾರೆ.
