ಭಾರತದಲ್ಲಿ ಅದರಲ್ಲೂ ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಈ ದೊಡ್ಡ ಪತ್ರೆಗೆ ಕರ್ಪೂರವಳ್ಳಿ, ಸಾಂಬಾರುಬಳ್ಳಿ ಎಂಬ ವಿಶೇಷ ನಾಮವಳಿಗಳು ಇವೆ. ಇದರ ಮೂಲ ದಕ್ಷಿಣ ಮತ್ತು ಪೂರ್ವ ಆಫ್ರಿಕಾ ಆದರೂ ದಕ್ಷಿಣ ಭಾರತದಲ್ಲಿ ಇದರ ಬಳಕೆಯನ್ನು ಹೆಚ್ಚಾಗಿ ಅಲಂಕಾರಕ್ಕೆ, ಮನೆಮದ್ದಿಗೆ ಹಾಗೂ ಪೌಷ್ಟಿಕ ಆಹಾರಗಳಿಗೆ ಬಳಸುತ್ತಾರೆ. ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಇದನ್ನು ಶೀತ, ಜ್ವರ, ಕೆಮ್ಮುಗಳಿಗೆ ಔಷಧಿಯಾಗಿ ಬಳಸುತ್ತಾರೆ. ಇದೇ ದೊಡ್ಡಪತ್ರೆಯನ್ನು ಆಫ್ರಿಕಾದಲ್ಲಿ ಪುದೀನಾದ ಬದಲಾಗಿ ಮಾಂಸಾಹಾರದ ಖಾದ್ಯಗಳಲ್ಲಿ ಬಳಸುತ್ತಾರೆ. ಚೇಳು ಕಚ್ಚಿದರೆ ಅಥವಾ ಗಾಯವಾದಾಗ ಇದನ್ನು ಪ್ರಥಮಚಿಕಿತ್ಸೆಗೆ ಬಳಸುತ್ತಾರೆ. ದೊಡ್ಡಪತ್ರೆ ಎಲೆ, ತುಳಸಿ ಎಲೆ ಹಾಗೂ ವೀಳ್ಯೆದೆಲೆಯನ್ನು ಜಜ್ಜಿ ರಸ ತೆಗೆದು ಜೇನುತುಪ್ಪ ಬೆರೆಸಿ ಮಕ್ಕಳಿಗೆ ನೀಡಿದರೆ ಪಿತ್ತ, ಕೆಮ್ಮು, ನೆಗಡಿ ಕಮ್ಮಿಯಾಗುತ್ತದೆ. ಇದರ ಎಲೆಯನ್ನು ಹುಳುಕಡ್ಡಿ ಆಗಿರುವ ಭಾಗಕ್ಕೆ ತಿಕ್ಕುತ್ತಿದ್ದರೆ ಬೇಗ ವಾಸಿಯಾಗುತ್ತದೆ. ದೊಡ್ಡಪತ್ರೆ, ಕಾಳುಮೆಣಸು, ಉಪ್ಪು ಅಗಿದು ರಸ ಕುಡಿದರೆ ಅರಿಶಿಣ ಕಾಮಾಲೆ ಹಾಗೂ ಬಾಯಿಯ ದುರ್ನಾತಕ್ಕೆ ಒಂದು ಒಳ್ಳೆಯ ಮನೆಮದ್ದಾಗಿದೆ. ಇದನ್ನು ತಂಬುಳಿ, ಚಟ್ನಿಯಾಗಿ ಸೇವಿಸಿದರೆ ಪಿತ್ತದ ಸಮಸ್ಯೆ ಆದಷ್ಟು ಬೇಗ ಶಮನವಾಗುತ್ತದೆ.
