
ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲೂಕಿನ ಶಿವಪುರ ಸಮೀಪದ ಕೊಪ್ಪ–ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ ಬಳಿ ನಾಲ್ಕು ಚೀಲಗಳಲ್ಲಿ ಗೋವಿನ ಕಳೆಬರಹ ಪತ್ತೆಯಾಗಿರುವ ಘಟನೆ ತೀವ್ರ ಚರ್ಚೆಗೆ ಕಾರಣವಾಗಿದೆ. ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಕಾಫಿನಾಡಿನಲ್ಲಿ ಗೋಹತ್ಯೆ ಪ್ರಕರಣಗಳು ಎಗ್ಗಿಲ್ಲದೆ ಮುಂದುವರೆಯುತ್ತಿರುವುದಾಗಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದುಷ್ಕರ್ಮಿಗಳು ಚೀಲಗಳಲ್ಲಿ ಕಳೆಬರಹ ತುಂಬಿ ರಸ್ತೆ ಬದಿಗೆ ಎಸೆದಿದ್ದು, ಘಟನೆಗೆ ಸಂಬಂಧಿಸಿದಂತೆ ಭಜರಂಗದಳ ಕಾರ್ಯಕರ್ತರು ಕೊಪ್ಪ–ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿ, ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿದರು. ಈ ಹಿನ್ನೆಲೆಯಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ಆರೋಪದಲ್ಲಿ ವಿನಯ್ ಶಿವಪುರ ಸೇರಿದಂತೆ ಹಲವರ ವಿರುದ್ಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.




