
ದ್ರಾಕ್ಷಿ: ಬೇಸಿಗೆಯ ಬಿಸಿಲಿನಲ್ಲಿ ದೇಹಕ್ಕೆ ತಂಪು ನೀಡುವ ಹಣ್ಣುಗಳಲ್ಲಿ ದ್ರಾಕ್ಷಿ ಪ್ರಮುಖವಾಗಿದೆ. ರಸಭರಿತ, ಸಿಹಿ-ಹುಳಿ ಮಿಶ್ರಣದ ರುಚಿಯನ್ನು ಹೊಂದಿರುವ ದ್ರಾಕ್ಷಿ ಹಣ್ಣುಗಳು ಕಣ್ಣಿಗೆ ಆಕರ್ಷಕವಾಗಿರುವುದರ ಜೊತೆಗೆ ದೇಹಕ್ಕೂ ಹಿತಕರವಾಗಿವೆ. ಹಸಿರು, ಕೆಂಪು, ಕಪ್ಪು ಸೇರಿದಂತೆ ವಿವಿಧ ಬಣ್ಣಗಳಲ್ಲಿ ಲಭ್ಯವಿರುವ ಈ ಹಣ್ಣುಗಳು ಪೋಷಕಾಂಶಗಳಲ್ಲಿ ಸಮೃದ್ಧವಾಗಿವೆ. ದ್ರಾಕ್ಷಿಯಲ್ಲಿ ಇರುವ ಪಾಲಿಫೆನಾಲ್ ಹಾಗೂ ರೆಸ್ವೆರಾಟ್ರೋಲ್ ಎಂಬ ಉತ್ಕರ್ಷಣ ನಿರೋಧಕಗಳು ಕ್ಯಾನ್ಸರ್ ಗಡ್ಡೆಗಳ ಬೆಳವಣಿಗೆಯನ್ನು ತಡೆಯುವಲ್ಲಿ ಸಹಕಾರಿ ಎನ್ನಲಾಗಿದೆ. ಹೃದಯಾರೋಗ್ಯವನ್ನು ಕಾಪಾಡುವಲ್ಲಿ ಸಹ ದ್ರಾಕ್ಷಿ ಸಹಾಯ ಮಾಡುತ್ತಿದ್ದು, ರಕ್ತಪರಿಚಲನೆಯನ್ನು ಸುಧಾರಿಸುತ್ತದೆ ಹಾಗೂ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಲು ನೆರವಾಗುತ್ತದೆ. ನಿಯಮಿತವಾಗಿ ಸೇವಿಸಿದರೆ ಕಣ್ಣಿನ ದೃಷ್ಟಿ ಸಮಸ್ಯೆಗಳನ್ನು ಕಡಿಮೆ ಮಾಡುವ ಸಾಧ್ಯತೆ ಇದ್ದು, ವಿಶೇಷವಾಗಿ ಕೆಂಪು ದ್ರಾಕ್ಷಿ ದೃಷ್ಟಿದೋಷವನ್ನು ತಗ್ಗಿಸಲು ಸಹಕಾರಿ. ತಾಮ್ರ, ಕಬ್ಬಿಣ ಮತ್ತು ಮ್ಯಾಂಗನೀಸ್ನಂತಹ ಖನಿಜಾಂಶಗಳಿಂದ ಸಮೃದ್ಧವಾಗಿರುವ ದ್ರಾಕ್ಷಿ ಮೂಳೆಗಳ ಬಲವರ್ಧನೆಗೂ ಸಹಕಾರಿಯಾಗಿದೆ. ಮಿತ ಪ್ರಮಾಣದಲ್ಲಿ ಸೇವಿಸಿದರೆ ಮಧುಮೇಹಿಗಳಿಗೂ ಸುರಕ್ಷಿತವಾಗಿದ್ದು, ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ ಬೇಸಿಗೆಯಲ್ಲಿ ದ್ರಾಕ್ಷಿಯನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.







