
ಬೆಂಗಳೂರು: ರಾಜ್ಯ ಕಾಂಗ್ರೆಸ್ನಲ್ಲಿ ಸದ್ಯಕ್ಕೆ ಎಲ್ಲವೂ ಸ್ಥಿರವಾಗಿದೆ ಎಂಬ ನಿರಾಳ ವಾತಾವರಣ ನಿರ್ಮಾಣವಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಹೈಕಮಾಂಡ್ನಿಂದ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನೀಡಿರುವ ಸ್ಪಷ್ಟ ಸಂದೇಶವಾಗಿದೆ. ಆಗಸ್ಟ್ ಕ್ರಾಂತಿ, ಸೆಪ್ಟೆಂಬರ್ ಕ್ರಾಂತಿ ಎಂಬಂತೆ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದ ಸಚಿವರು, ಶಾಸಕರು ಮತ್ತು ಮುಖಂಡರ ಬಾಯಿ ಮುಚ್ಚಿಸಲು ಎಐಸಿಸಿ ಕಟ್ಟುನಿಟ್ಟಾಗಿ ಸೂಚನೆ ನೀಡಿದೆ. ಮಳೆ ನಿಂತರೂ ಹನಿ ನಿಂತಿಲ್ಲ ಎಂಬಂತೆ ರಾಜ್ಯ ಕಾಂಗ್ರೆಸ್ ಸರಕಾರದ ಒಳಗಿರುವ ಗೊಂದಲಗಳು ನಿಂತಂತಿಲ್ಲ. ನಾಯಕತ್ವದ ಪರ ಹಾಗೂ ವಿರುದ್ಧದ ಹೇಳಿಕೆಗಳಿಗೆ ಫುಲ್ ಸ್ಟಾಪ್ ಹಾಕಲು ಹೈಕಮಾಂಡ್ ಆದೇಶಿಸಿದ್ದರೂ ಕೆಲವರು ಇನ್ನೂ ಮಾತನಾಡುತ್ತಿರುವುದು ಗೋಜಲು ಹುಟ್ಟುಹಾಕುತ್ತಿದೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಹೈಕಮಾಂಡ್ ಸ್ಪಷ್ಟನೆ ನೀಡಿ, ರಾಜ್ಯದಲ್ಲಿ ಸಿಎಂ, ಡಿಸಿಎಂ, ಕೆಪಿಸಿಸಿ ನಾಯಕತ್ವ ಹಾಗೂ ಸಂಪುಟದಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ಘೋಷಿಸಿ, ಇದರ ಬಗ್ಗೆ ಯಾರೂ ಚರ್ಚಿಸಬಾರದು ಎಂಬುದು ಅವರ ಸೂಚನೆಯ ಸಾರವಾಗಿದೆ. ಪ್ರತಿಬಾರಿಯೂ ಸಿಎಂ ಹಾಗೂ ಡಿಸಿಎಂ ದಿಲ್ಲಿಗೆ ತೆರಳಿದಾಗ, ಪ್ರಮುಖ ಬೆಳವಣಿಗೆ ನಡೆಯಲಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಹರಡುತ್ತಿವೆ. ರಾಹುಲ್ ಗಾಂಧಿ ಅವರೊಂದಿಗೆ ನಡೆಯುವ ಮಾತುಕತೆ ಮತ್ತು ನಿರ್ಣಾಯಕ ಸೂಚನೆಗಳ ಬಗ್ಗೆ ನಿರಂತರ ಚರ್ಚೆಗಳು ನಡೆಯುತ್ತಿದ್ದು, ಈ ಪ್ರವಾಸಗಳು ಹೊಸ ಊಹಾಪೋಹಗಳಿಗೆ ತಕ್ಕವಾಗಿ ವಾತಾವರಣ ನಿರ್ಮಿಸುತ್ತಿವೆ.