ಪುತ್ತೂರು: ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಪುತ್ತೂರಿನ ಖಾಸಗಿ ಕಾಲೇಜು ಕಾರ್ಯಕ್ರಮದಲ್ಲಿ ಕೋಮುದ್ವೇಷ ಉಕ್ಕಿಸುವ ಪ್ರಚೋದನಾಕಾರಿ ಭಾಷಣ ಮಾಡಿದ್ದಾರೆ ಎಂಬ ಆರೋಪದಡಿ ಮತ್ತೊಮ್ಮೆ ಎಫ್ಐಆರ್ ದಾಖಲಾಗಿದೆ. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರ ಎದುರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದು, ಇದರಿಂದ ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಉಂಟಾಗಿದೆ ಮತ್ತು ಹಿಂಸೆಗೆ ಪ್ರಚೋದನೆ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಪುತ್ತೂರು ನಿವಾಸಿ ಹಾಗೂ ಮಾನವ ಬಂಧುತ್ವ ವೇದಿಕೆಯ ತಾಲೂಕು ಸಮಿತಿ ಅಧ್ಯಕ್ಷ ರಾಮಚಂದ್ರ ಕೆ. ಅವರ ದೂರಿನ ಮೇರೆಗೆ ಪುತ್ತೂರು ನಗರ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ಗಳು 196, 299, 302, 353(2) ಹಾಗೂ 3(5) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದಕ್ಕೂ ಮುನ್ನ ದ್ವೇಷ ಭಾಷಣ ಮಾಡದಂತೆ ನ್ಯಾಯಾಲಯ ವಿಧಿಸಿದ್ದ ಷರತ್ತುಗಳನ್ನು ಉಲ್ಲಂಘಿಸಿರುವುದರಿಂದ ಪ್ರಭಾಕರ್ ಭಟ್ ಅವರಿಗೆ ಕಾನೂನುಬದ್ಧವಾಗಿ ಗಂಭೀರ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಭಾಷಣವನ್ನು ಪ್ರಸಾರ ಮಾಡಿದ ‘ವಿಕಸನ ಟಿವಿ’ ಯೂಟ್ಯೂಬ್ ಚಾನಲ್ ಹಾಗೂ ಕಾರ್ಯಕ್ರಮದ ಆಯೋಜಕರ ವಿರುದ್ಧವೂ ದೂರು ದಾಖಲಿಸಲಾಗಿದೆ.
