
ಚಿಕ್ಕಮಗಳೂರು: ಚಿಕ್ಕಮಗಳೂರು ತಾಲೂಕಿನ ಅರೆನೂರು ಸಮೀಪದ ಹಕ್ಕಿಮಕ್ಕಿ ಗ್ರಾಮದಲ್ಲಿ ನಡೆದ ದಾರುಣ ಘಟನೆವೊಂದರಲ್ಲಿ, ಕಾಫಿನಾಡಿನಲ್ಲಿ ಮಗನೇ ತನ್ನ ತಾಯಿಯನ್ನು ಕೊಂದು, ಶವವನ್ನು ಸುಟ್ಟು ಹಾಕಿದ ಭೀಕರ ಘಟನೆಯು ಬೆಳಕಿಗೆ ಬಂದಿದೆ. ಈ ಪಾಪಿ ಪುತ್ರ ಪವನ್ ತಿಂಗಳ ಹಿಂದೆ ತನ್ನ ತಂದೆ ಸೋಮೇಗೌಡನನ್ನು ಲೆದರ್ ಬೆಲ್ಟ್ನಿಂದ ಬಡಿದು ಬೆನ್ನಿನ ಚರ್ಮ ಸುಲಿಯುವಂತೆ ಪೀಡಿಸಿದ್ದನು. ನಿತ್ಯ ಕೂಲಿ ಕೆಲಸ ಮಾಡಿಕೊಂಡು ಸಂಜೆಯಾದ್ಮೇಲೆ ಮದ್ಯಪಾನ ಮಾಡಿ ತಂದೆ-ತಾಯಿಯನ್ನು ಹೊಡೆದಿದ್ದ ಈ ಯುವಕನ ವರ್ತನೆ ಮೃಗೀಯವಾಗಿತ್ತು. ತಾಯಿಯ ಸಾವಿನ ಹಿಂದೆ ಈತನ ಕೈವಾಡವಿದೆ ಎಂಬುದು ದೃಢಪಟ್ಟಿದ್ದು, ಇದೀಗ ಪೊಲೀಸರ ವಶದಲ್ಲಿದ್ದಾನೆ. ಮಗನೆಂಬ ಮಮಕಾರದಿಂದ ತಂದೆ-ತಾಯಿ ಯಾರಿಗೂ ಈತನ ಕ್ರೌರ್ಯದ ಬಗ್ಗೆ ಹೇಳದೆ ನೋವು ಅನುಭವಿಸುತ್ತಿದ್ದರು. ಅಕ್ಕಪಕ್ಕದವರು ಈತನಿಗೆ ಹಲವು ಬಾರಿ ಬುದ್ಧಿ ಹೇಳಿದರೂ ಫಲವಾಗಿರಲಿಲ್ಲ. ಸೋಮೇಗೌಡನ ಬೆನ್ನಿನ ಸ್ಥಿತಿ ನೋಡಿದರೆ ಯಾರ ಕಣ್ಣಲ್ಲಾದರು ನೀರು ಬರುವಂತಿತ್ತು. ಇಂತಹ ಮಕ್ಕಳು ಹುಟ್ಟುವುದಕ್ಕಿಂತ ಹುಟ್ಟದೆ ಇರುವುದು ಒಳಿತು ಎನ್ನುವಂತ ಸ್ಥಿತಿಯನ್ನು ಈ ದುರಂತ ಉಂಟುಮಾಡಿದೆ.