ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲೂಕಿನ ಸಖರಾಯ ಪಟ್ಟಣದಲ್ಲಿ ಕಾಂಗ್ರೆಸ್ ಗ್ರಾ.ಪಂ ಸದಸ್ಯ ಹಾಗೂ ಮುಂಬರುವ ಜಿಲ್ಲಾ ಪಂಚಾಯತಿ ಚುನಾವಣೆಗೆ ಟಿಕೆಟ್ ಆಕಾಂಕ್ಷಿಯಾಗಿದ್ದ ಗಣೇಶ್ ಅವರನ್ನು ಯುವಕರ ಗುಂಪೊಂದು ಮಚ್ಚಿನಿಂದ ಹತ್ಯೆ ಮಾಡಿದೆ. ರಾತ್ರಿ ಸುಮಾರು 10:30 ರ ಹೊತ್ತಿಗೆ ಎರಡು ಗುಂಪುಗಳ ನಡುವೆ ದತ್ತ ಜಯಂತಿ ಬ್ಯಾನರ್ ತೆರವು ವಿಚಾರವಾಗಿ ಉಂಟಾದ ಗಲಾಟೆ ಈ ರಕ್ತಪಾತಕ್ಕೆ ಕಾರಣವಾಗಿದೆ. ಇದಕ್ಕೂ ಅರ್ಧಗಂಟೆ ಮುನ್ನ ಸಖರಾಯ ಪಟ್ಟಣದ ಬಾರ್ ಬಳಿ ಜಗಳ ನಡೆದಿದ್ದು, ನಂತರ ಕಲ್ಮುರುಡೇಶ್ವರ ಮಠದ ಬಳಿ ಮತ್ತೆ ಘರ್ಷಣೆ ಉಂಟಾಗಿದ್ದರಿಂದ ಗಣೇಶ್ ಸಾವನ್ನಪ್ಪಿದರು. ಘಟನೆಯಲ್ಲಿ ಎದುರಾಳಿ ಗುಂಪಿನ ಇಬ್ಬರು ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಸಖರಾಯ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
