
ಚಿಕ್ಕಮಗಳೂರು: ಕಾಫಿ ತೋಟದ ಮೇಲ್ಭಾಗದ ಕಾಡಿನಲ್ಲಿ ಕೆರೆ ಕಟ್ಟೆ ಒಡೆದು ಕಾಫಿ ತೋಟ ಬಹುತೇಕ ಜಲಾವೃತವಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ, ಖಾಂಡ್ಯ ಸಮೀಪದ ಹೊನ್ನೇಕೊಪ್ಪ ಗ್ರಾಮದಲ್ಲಿ ಘಟನೆ ನಡೆದಿದೆ. ಹೊನ್ನೆಕೊಪ್ಪ ಗ್ರಾಮದ ಚಂದ್ರು ಎಂಬುವವರು ನಿನ್ನೆ ಸಂಜೆ ಹೋಗಿ ತೋಟ ನೋಡಿಕೊಂಡು ಬಂದಿದ್ದರು. ಆದರೆ ಇಂದು ಬೆಳಗ್ಗೆ ಹೋಗಿ ನೋಡುವಷ್ಟರಲ್ಲಿ ತೋಟ ಕೆರೆ ನೀರಿನಿಂದ ಜಲಾವೃತವಾಗಿದೆ. ದೊಡ್ಡ-ದೊಡ್ಡ ಕಲ್ಲಿನ ರಾಶಿ ಬಂದು ತೋಟದೊಳಗೆ ಕೂತಿದ್ದು. ತೋಟದಲ್ಲಿ ನೀರು ಹರಿದಿರೋ ರಭಸಕ್ಕೆ, ನೀರು ಹರಿದಿರೋ ಮಾರ್ಗದಲ್ಲಿ ಅಡಿಗಟ್ಟಲೇ ಹೊಂಡ ಬಿದ್ದಿದೆ. ಈ ವರ್ಷ ನಿರಂತರ ಮಳೆಯಿಂದ ಭೂಮಿಯ ತೇವಾಂಶ ಹೆಚ್ಚಾಗಿದ್ದು, ನೀರು ಹರಿಯುವ ವೇಗಕ್ಕೆ ಕಾಫಿ ಗಿಡಗಳು ಬುಡ ಸಮೇತ ಕಿತ್ತು ಹೋಗಿವೆ. ಚಂದ್ರು ಅವರ ತೋಟದ ಮೇಲ್ಭಾಗದ ಕಾಡಿನಲ್ಲಿ ಕೆರೆ ಇದ್ದು ಕಳೆದ ಒಂದೂವರೆ ವರ್ಷದ ಹಿಂದೆ ಅರಣ್ಯ ಅಧಿಕಾರಿಗಳು ಕಾಡು ಪ್ರಾಣಿಗಳ ಕುಡಿಯೋ ನೀರಿಗೆಂದು ಕೆರಯನ್ನು ದುರಸ್ಥಿ ಮಾಡಿಸಿದ್ದರು. ಆದರೆ ಈ ಬಾರಿ ಜನವರಿಯಿಂದಲೂ ನಿರಂತರ ಮಳೆಯಾಗಿದ್ದು ಕೆರೆ ತುಂಬಿತ್ತು. ಕೆರೆಯ ತೂಬಿಗೆ ಕಸ ಕಟ್ಟಿ ನೀರು ಹೊರಹೋಗಲು ಜಾಗವಿಲ್ಲದೆ ಕೆರೆ ಏರಿಯಲ್ಲಿ ತೇವಾಂಶ ಹೆಚ್ಚಾಗಿ ಸುಮಾರು ಒಂದೂವರೆ ಎಕರೆ ವಿಸ್ತೀರ್ಣದ ಕೆರೆ ಒಡೆದು ಈ ಅನಾಹುತ ಸಂಭವಿಸಿದೆ. ನಿನ್ನೆ ಸಂಜೆ ಚೆನ್ನಾಗಿದ್ದ ತೋಟದ ಸ್ಥಿತಿಯನ್ನು ಇಂದು ಬೆಳಗ್ಗೆ ಕಂಡು ತೋಟದ ಮಾಲೀಕ ಕೂಡಾ ಕಂಗಾಲಾಗಿದ್ದಾರೆ.