ಕೊಟ್ಟಿಗೆಹಾರ ಗ್ರಾಮದ ವಿದ್ಯಾರ್ಥಿನಿ ಕುಮಾರಿ ಸಿರಿ ಕಳೆದ ವರ್ಷ ಚಾರ್ಮಾಡಿ ಘಾಟಿಯಲ್ಲಿ ನಡೆದ ಆಟೋ ಅಪಘಾತದಲ್ಲಿ ಕೋಮಾ ಸ್ಥಿತಿಗೆ ತಲುಪಿದ್ದು, ಇದೀಗ ಸ್ವಲ್ಪ ಚೇತರಿಸಿಕೊಂಡರೂ ಇನ್ನೂ ನಡೆಯಲಾಗದೆ ಹಾಸಿಗೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಿರಿ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸುಮಾರು 15 ಲಕ್ಷ ರೂ. ಚಿಕಿತ್ಸಾ ವೆಚ್ಚ ಅಗತ್ಯವಿರುವುದನ್ನು ಗಮನಿಸಿ, ಬಣಕಲ್ ಯುವಕರ ತಂಡವು ಬಣಕಲ್ ಡ್ಯಾನ್ಸ್ ಧಮಾಕ ಕಾರ್ಯಕ್ರಮದ ವೇಳೆ ಟಿವಿ ಮುಖೇನ ಅವರ ಸ್ಥಿತಿಯ ದೃಶ್ಯಗಳನ್ನು ಪ್ರದರ್ಶಿಸಿ ನೆರವಿಗೆ ಮನವಿ ಮಾಡಿತ್ತು. ಇದಕ್ಕೆ ಸ್ಪಂದಿಸಿದ ಬಣಕಲ್ ನಿವಾಸಿ ಮೈಸೂರು ಉದ್ಯಮಿ ದಿನೇಶ್ ಶೆಟ್ಟಿ ಅವರು ಕೊಟ್ಟಿಗೆಹಾರದಲ್ಲಿರುವ ಸಿರಿಯ ಮನೆಗೆ ತೆರಳಿ ರೂ.1 ಲಕ್ಷದ ಚೆಕ್ ನೀಡಿ ಮಾನವೀಯ ನೆರವು ನೀಡಿದರು. ಈ ವೇಳೆ ಮಾತನಾಡಿದ ಅವರು, ಮೂಡಬಿದಿರೆಯ ಯೆನಪೋಯದಲ್ಲಿ ಪ್ರಥಮ ವರ್ಷದ ಇಂಜಿನಿಯರಿಂಗ್ ಓದುತ್ತಿದ್ದ ಸಿರಿ ಪ್ರತಿಭಾವಂತ ಹಾಗೂ ಉದಯೋನ್ಮುಖ ವಿದ್ಯಾರ್ಥಿನಿಯಾಗಿದ್ದು, ಬಡ ಕುಟುಂಬದಿಂದ ಬಂದ ಅವಳ ಮೇಲೆ ಪೋಷಕರು ಉತ್ತಮ ಭವಿಷ್ಯದ ಕನಸು ಕಟ್ಟಿಕೊಂಡಿದ್ದರು, ಆದರೆ ದುರದೃಷ್ಟಕರ ಅಪಘಾತವು ಆ ಕನಸಿಗೆ ಅಡ್ಡಿಯಾಗಿದ್ದು ನೋವು ತಂದಿದೆ ಎಂದು ಹೇಳಿದರು ಹಾಗೂ ಸಿರಿ ಶೀಘ್ರ ಗುಣಮುಖಳಾಗಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಸಿರಿಯ ತಂದೆ ಆಟೋ ಮಹೇಂದ್ರ, ತಾಯಿ ಶಿಲ್ಪ, ಸಮಾಜಸೇವಕ ಸಂಜಯಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.
