
ಚಾಮರಾಜನಗರ: ಚಾಮರಾಜನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ ಅವರು, ಸುನೀತಾ (ಸಾನೆಟ್) ಕವಿತೆಗಳ ರಚನೆಯಲ್ಲಿ ತೊಡಗಿರುವ ಯುವ ಕವಿಗಳು ಡಾ. ಚನ್ನವೀರ ಕಣವಿಯವರ ಸಾಹಿತ್ಯವನ್ನು ಮಾರ್ಗದರ್ಶಕವಾಗಿ ಅನುಸರಿಸಬಹುದು ಎಂದು ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ತಾಲೂಕು ಪರಿಷತ್ತು ಆಯೋಜಿಸಿದ್ದ ಡಾ. ಚನ್ನವೀರ ಕಣವಿ ಹಾಗೂ ಡಾ. ಸಿದ್ದಲಿಂಗಯ್ಯ ಅವರ ಸಾಹಿತ್ಯ ಕೊಡುಗೆಗಳ ಕುರಿತ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು, ಕಣವಿಯವರು ಸಮನ್ವಯ ಸಾಹಿತ್ಯದ ಶ್ರೇಷ್ಠ ರಚನಾಕಾರರಾಗಿದ್ದು ತಮ್ಮ ಇಡೀ ಜೀವನವನ್ನು ಸಾಹಿತ್ಯ ಸೇವೆಗೆ ಅರ್ಪಿಸಿ ಅಪಾರ ಕೊಡುಗೆ ನೀಡಿದ್ದಾರೆ ಎಂದರು. 18 ಕವನ ಸಂಕಲನಗಳು, ಐದು ವಿಮರ್ಶಾ ಕೃತಿಗಳು ಹಾಗೂ ಮಕ್ಕಳಿಗಾಗಿ ಸಂಪಾದಿತ ಗ್ರಂಥಗಳನ್ನು ರಚಿಸಿದ ಅವರು ರೂಪ–ವಸ್ತು ವೈವಿಧ್ಯತೆಯೊಂದಿಗೆ ಸುನೀತಾ ಎಂಬ ವಿಶಿಷ್ಟ ಪ್ರಕಾರವನ್ನು ಕನ್ನಡದಲ್ಲಿ ಪರಿಚಯಿಸಿ, ತಮ್ಮ ಮೂಲ ಚಿಂತನೆ, ತತ್ತ್ವಜ್ಞಾನ ಮತ್ತು ಜೀವನ ಭರವಸೆಗಳನ್ನು ಸಾಹಿತ್ಯದ ಮೂಲಕ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು. ಜೊತೆಗೆ ಡಾ. ಸಿದ್ದಲಿಂಗಯ್ಯ ಅವರು ಸಾಮಾಜಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಬೆಳಗಿಸಿದ ಮಹತ್ವದ ಸಾಹಿತಿಯಾಗಿದ್ದಾರೆ ಎಂದರು. ನಿರ್ದೇಶಕ ರವಿಚಂದ್ರ ಪ್ರಸಾದ್ ಮಾತನಾಡಿ, ಸಿದ್ದಲಿಂಗಯ್ಯನವರಿಗೆ ಚಾಮರಾಜನಗರದೊಂದಿಗೆ ಆಪ್ತ ಒಡನಾಟವಿದ್ದು, ಅವರು ಸದಾ ಸೃಜನಾತ್ಮಕ ಸಾಹಿತ್ಯದ ಮೂಲಕ ನೊಂದ ಜನರ ಧ್ವನಿಯನ್ನು ಜಗತ್ತಿಗೆ ಪರಿಚಯಿಸಿದರು ಹಾಗೂ ಸಾಮಾಜಿಕ ಅವ್ಯವಸ್ಥೆಗಳನ್ನು ತಿದ್ದುವಲ್ಲಿ ಸಾಹಿತ್ಯವನ್ನು ಸಾಧನವಾಗಿಸಿಕೊಂಡರು ಎಂದು ತಿಳಿಸಿದರು. ಬರಹಗಾರ ಲಕ್ಷ್ಮಿ ನರಸಿಂಹ ಅವರು, ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಸಿದ್ದಲಿಂಗಯ್ಯ ಸರಸ್ವತಿಯ ಪುತ್ರರಾಗಿ, ಪ್ರಾಧ್ಯಾಪಕರಾಗಿ ಅನೇಕ ಶಿಷ್ಯರನ್ನು ರೂಪಿಸಿ ನಾಡಿನಾದ್ಯಂತ ಸಾಹಿತ್ಯಾಸಕ್ತರನ್ನು ಬೆಳೆಸಿದರು ಎಂದರು. ಕಾರ್ಯಕ್ರಮದಲ್ಲಿ ರವಿಚಂದ್ರ ಪ್ರಸಾದ್ ಕಹಳೆ ಮತ್ತು ಶಿವಲಿಂಗ ಮೂರ್ತಿ ಗೀತಗಾಯನ ನಡೆಸಿಕೊಟ್ಟರು. ಕನ್ನಡ ಸಾಹಿತ್ಯ ಪರಿಷತ್ತಿನ ಶಿವಲಿಂಗ ಮೂರ್ತಿ, ಬಿ.ಕೆ. ಆರಾಧ್ಯ, ಪದ್ಮ ಪುರುಷೋತ್ತಮ್, ನಿವೃತ್ತ ಶಿಕ್ಷಕಿ ಸರಸ್ವತಿ, ಮನೋಜ್, ಕಿರಣ್ ಆದಿತ್ಯ, ಪ್ರಕಾಶ್, ಮಂಜುನಾಥ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.




