
ಚಾಮರಾಜನಗರ: ಮಹಾ ಅವತಾರ ನರಸಿಂಹ ಭಕ್ತ ಮಂಡಳಿ ವತಿಯಿಂದ ನಗರದ ಸಿಂಹ ಮೂವಿ ಚಿತ್ರಮಂದಿರ ದಲ್ಲಿ ಮಹಾ ಅವತಾರ ಲಕ್ಷ್ಮೀನರಸಿಂಹ ಚಲನಚಿತ್ರವನ್ನು ನೂರಾರು ಜನ ಒಟ್ಟುಗೂಡಿ , ಶ್ರೀ ಲಕ್ಷ್ಮಿ ನರಸಿಂಹ ದೇವರಿಗೆ ಪೂಜಿಸಿ ಪ್ರಸಾದ ,ಸ್ವೀಕರಿಸಿ ಭಕ್ತಿಪೂರ್ವಕವಾಗಿ ಚಲನಚಿತ್ರವನ್ನು ವೀಕ್ಷಿಸುವ ಕಾರ್ಯಕ್ರಮ ವಿಶೇಷವಾಗಿ ಜರಗಿತು.
ನಗರದ ಮಹಾವತಾರ ನರಸಿಂಹ ಭಕ್ತ ಮಂಡಳಿಯ ಪ್ರತಾಪ್ ರವರು ಮಾತನಾಡಿ ಭಕ್ತಿ ಪ್ರಧಾನವಾದ ಚಲನಚಿತ್ರಗಳು ಬರುವುದು ಇತ್ತೀಚೆಗೆ ಬಹಳ ಕಡಿಮೆಯಾಗಿದೆ. ಭಾರತೀಯ ಸಂಸ್ಕೃತಿ ಧರ್ಮದ ನೂರಾರು ಕಥೆಗಳನ್ನು ಆಧುನಿಕ ತಂತ್ರಜ್ಞಾನದ ಮೂಲಕ ತಿಳಿಸುವ ಕಾರ್ಯವನ್ನು ಮಾಡಿರುವ ಹೊಂಬಾಳೆ ಫಿಲಂಸ್ ನ ಮಹಾ ಅವತಾರ ನರಸಿಂಹ ಚಿತ್ರ ತಯಾರಿಕೆಯ ಸರ್ವರಿಗೂ ಕೂಡ ಚಿತ್ರ ವೀಕ್ಷಕರ ಪರವಾಗಿ ಧನ್ಯವಾದಗಳು ಅರ್ಪಿಸಬೇಕು. ಸಂಘಟನೆಯ ಮೂಲಕ ಚಲನಚಿತ್ರ ವೀಕ್ಷಿಸುವ ಮತ್ತು ಪೂಜೆ ಸಲ್ಲಿಸಿ ಸರ್ವರು ಕೌಟುಂಬಿಕ ಚಿತ್ರಗಳನ್ನು ನೋಡುವ ಅವಕಾಶವನ್ನು ಒದಗಿಸಲಾಯಿತು ಎಂದು ತಿಳಿಸಿದರು.
ಶ್ರೀ ಕೃಷ್ಣ ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಸಂಸ್ಕೃತಿ ಚಿಂತಕರಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಕೌಟುಂಬಿಕ ಚಿತ್ರಗಳು ವಿಶೇಷವಾಗಿ ಪ್ರಭಾವವನ್ನು ಬೀರುತ್ತದೆ .ಅದರಲ್ಲೂ ಭಕ್ತಿ ಪ್ರಧಾನ ಚಿತ್ರಗಳು ಮಾನವನ ಸಮಗ್ರ ವ್ಯಕ್ತಿತ್ವ ,ವಿಕಾಸ ಹಾಗೂ ಬೆಳವಣಿಗೆಗೆ ತುಂಬಾ ಪರಿಣಾಮ ಉಂಟುಮಾಡುತ್ತದೆ. ಚಲನಚಿತ್ರಗಳು ಪ್ರತಿಯೊಬ್ಬ ವ್ಯಕ್ತಿಯನ್ನು ಬದಲಾಯಿಸುವ ಶಕ್ತಿಯನ್ನು ಹೊಂದಿದೆ .ತುಂಬಾ ಪ್ರಭಾವ ಬೀರುತ್ತದೆ. ಹೊಂಬಾಳೆ ಸಂಸ್ಥೆಯವರು ಗ್ರಾಫಿಕ್ ಮೂಲಕ ಭಕ್ತ ಪ್ರಹ್ಲಾದ ಹಿರಣ್ಯಕಶ್ಯಪನ ಕಥೆಯನ್ನು ಪರಿಣಾಮಕಾರಿಯಾಗಿ ರೂಪಿಸಿ, ಪ್ರತಿಯೊಬ್ಬ ಕಿರಿಯನಿಂದ ಹಿರಿಯ ವರೆಗೆ ನೋಡುವ ಅವಕಾಶವನ್ನು ಕಲ್ಪಿಸಿ ಕೊಟ್ಟಿರುವುದು ನಮ್ಮೆಲ್ಲರಿಗೂ ಹೆಮ್ಮೆ . ಭಾರತದ ನೂರಾರು ರಾಜ ಮಹಾರಾಜರು ,ದೇಶಕ್ಕಾಗಿ ಅರ್ಪಣೆ ಮಾಡಿಕೊಂಡ ತ್ಯಾಗಿಗಳು ಹಾಗೂ ಧರ್ಮದ ನೂರಾರು ಕಥೆ, ಉಪಕಥೆಗಳ ಸಮಗ್ರವಾದ ಚಿತ್ರಗಳು ಹೊರಬರಬೇಕು. ಮಕ್ಕಳಿಗೆ ವಿಶೇಷವಾಗಿ ಪರಿಣಾಮಕಾರಿಯಾಗಿ ಮನಸ್ಸಿನಲ್ಲಿ ಉಳಿದು ಧರ್ಮದ ಬೆಳವಣಿಗೆಗೆ ಕಾರಣವಾಗುತ್ತದೆ. ಸ್ವಯಂ ಪ್ರಚಾರ ಮಾಡಿ ನೂರಾರು ಜನರನ್ನು ಸೇರಿಸಿ ಕುಟುಂಬದ ಪ್ರತಿಯೊಬ್ಬ ಸದಸ್ಯರು ಲಕ್ಷ್ಮಿ ನರಸಿಂಹ ಚಿತ್ರ ನೋಡುವ ಅವಕಾಶವನ್ನು ಮಾಡಿಕೊಟ್ಟ ಮಹಾ ಅವತಾರ ಭಕ್ತ ಮಂಡಳಿಗೆ ಧನ್ಯವಾದಗಳು ನಾಗರಿಕರ ಪರವಾಗಿ ಅರ್ಪಿಸುವುದು ನಮ್ಮೆಲ್ಲರ ಕರ್ತವ್ಯವೆಂದು ತಿಳಿಸಿದರು.
ಸಿಂಹ ಚಲನಚಿತ್ರ ಮಂದಿರದ ಮಾಲೀಕರಾದ ಜಯಸಿಂಹ ಮಾತನಾಡಿ ಚಲನಚಿತ್ರ ಕ್ಷೇತ್ರ ಬಹಳ ಕಷ್ಟದಾಯಕವಾಗಿದೆ. ಚಿತ್ರಗಳ ವೀಕ್ಷಣೆಗೆ ವೀಕ್ಷಕರ ಕೊರತೆ ಕಂಡು ಬರುತ್ತಿದೆ. ಉತ್ತಮ ಕಥೆಯ ಚಲನಚಿತ್ರಗಳು ಬಂದಾಗ ಸಂತೋಷವಾಗುತ್ತದೆ. ವೀಕ್ಷಕರಿಗೆ ಬೇಕಾದ ವಿಶೇಷವಾದ ಚಿತ್ರಗಳ ನಿರ್ಮಾಣ ಆಗಬೇಕು. ಹೊಸ ಬದಲಾವಣೆಗೆ ವೀಕ್ಷಕರು ಕೈಜೋಡಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಬಾಲಸುಬ್ರಮಣ್ಯಂ, ಚಂದ್ರಶೇಖರ್, ನಗರಸಭಾ ಸದಸ್ಯ ಗಾಯತ್ರಿ, ರಾಧಾಕೃಷ್ಣ ,ಸತೀಶ್ , ಪುರೋಹಿತರಾದ ರಾಮಕೃಷ್ಣ ಭಾರದ್ವಾಜ, ರಾಮಮೂರ್ತಿ, ರಂಗರಾಜು, ಉಮೇಶ,ಡಾ. ಬಾಲಸುಬ್ರಮಣ್ಯಂ, ಚೈತನ್ಯ ಹೆಗಡೆ, ಅಜಯ್ ಸಿಂಹ, ಮಹಿಳಾ ಸಂಘದ ಅಧ್ಯಕ್ಷರು ,ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.