
ಬೆಂಗಳೂರು: ಕರ್ನಾಟಕದ ಹೆದ್ದಾರಿ ಮತ್ತು ರೈಲ್ವೆ ಅಭಿವೃದ್ಧಿಗೆ ಮಹತ್ವದ ಯೋಜನೆಗಳನ್ನು ಕೇಂದ್ರದ ಮುಂದಿಟ್ಟಿರುವ ರಾಜ್ಯ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಅವರು, ನವದೆಹಲಿಯಲ್ಲಿ ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯನ್ನು ಭೇಟಿಯಾಗಿ, ಮೂರು ಪ್ರಮುಖ ರಸ್ತೆ ಯೋಜನೆಗಳಿಗೆ ಅನುಮೋದನೆ ನೀಡುವಂತೆ ಮನವಿ ಮಾಡಿದ್ದಾರೆ. ಈ ಯೋಜನೆಗಳಲ್ಲಿ 114 ಕಿ.ಮೀ ಉದ್ದದ ಹಾಸನ-ಹಿರಿಯೂರು ಆರ್ಥಿಕ ಗ್ರೀನ್ಫೀಲ್ಡ್ ಕಾರಿಡಾರ್, ರಾಷ್ಟ್ರೀಯ ಹೆದ್ದಾರಿ 69ರ ಬಡವನಹಳ್ಳಿ-ಭೈರೆನಹಳ್ಳಿ ಭಾಗದ 32 ಕಿ.ಮೀ ಚತುಷ್ಪಥ ರಸ್ತೆ ಮತ್ತು ತುಮಕೂರು ನಗರದ ನಂದಿಹಳ್ಳಿ-ಮಲ್ಲಸಂದ್ರ ಹಾಗೂ ಮಲ್ಲಸಂದ್ರ-ವಸಂತನರಾಸಾಪುರದವರೆಗೆ 45 ಕಿ.ಮೀ ಬೈಪಾಸ್ ರಸ್ತೆ ಕಾಮಗಾರಿಗಳು ಸೇರಿವೆ. ಈ ಯೋಜನೆಗಳ ಅನುಷ್ಠಾನದಿಂದ ವಿವಿಧ ಜಿಲ್ಲೆಗಳ ಸಂಪರ್ಕ ಸುಲಭವಾಗುವುದರೊಂದಿಗೆ, ಕೈಗಾರಿಕೆ, ವ್ಯಾಪಾರ, ಹಾಗೂ ಸಾರಿಗೆ ವ್ಯವಸ್ಥೆಗೂ ಉತ್ತೇಜನ ಸಿಗಲಿದೆ. ಜೊತೆಗೆ ತಿಪಟೂರು ತಾಲ್ಲೂಕಿನ ಕೆ.ಬಿ.ಕ್ರಾಸ್ ಪ್ರದೇಶದ ಭೂಸ್ವಾಧೀನ ಸಮಸ್ಯೆಗಳನ್ನು ಬಗೆಹರಿಸಿ, ಭೂಮಿ ಮಾಲಿಕರಿಗೆ ಸೂಕ್ತ ಪರಿಹಾರ ನೀಡುವಂತೆ ಸಚಿವರು ಮನವಿ ಮಾಡಿಕೊಂಡಿದ್ದಾರೆ. ಇದರೊಂದಿಗೆ, ತುಮಕೂರು-ಬೆಂಗಳೂರು ನಡುವಿನ 70 ಕಿ.ಮೀ ರೈಲು ಮಾರ್ಗವನ್ನು ನಾಲ್ಕು ಪಥಗಳಾಗಿ ವಿಸ್ತರಿಸಲು ಯೋಜನೆ ರೂಪಿಸಿ ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ ಎಂಬ ಮಾಹಿತಿಯನ್ನೂ ಅವರು ನೀಡಿದ್ದಾರೆ.