
ಬೆಂಗಳೂರು : ಮಕ್ಕಳಿಗೆ ತಂಪು ಪಾನೀಯಗಳನ್ನು ನೀಡುವ ಮೊದಲು ಪೋಷಕರು ಎಚ್ಚರಿಕೆ ವಹಿಸುವ ಅಗತ್ಯವಿದೆ. ಜ್ಯೂಸ್ ಮಾದರಿಯ ‘ಬಜ್ ಬಾಲ್ಜ್’ ಎಂಬ ತಂಪು ಪಾನೀಯದಲ್ಲಿ ವಿಷಕಾರಿ ಅಂಶಗಳು ಪತ್ತೆಯಾಗಿರುವುದಾಗಿ ಮಾಹಿತಿ ಹೊರಬಿದ್ದ ಹಿನ್ನೆಲೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ. ಈ ಪಾನೀಯದಲ್ಲಿ ಅಧಿಕ ಪ್ರಮಾಣದ ಸಕ್ಕರೆ ಜೊತೆಗೆ ಸುಮಾರು ಶೇಕಡಾ 15ರಷ್ಟು ಆಲ್ಕೋಹಾಲ್ ಅಂಶ ಇರುವುದಾಗಿ ತಿಳಿದುಬಂದಿದ್ದು, ಟಿನ್ ರೂಪದಲ್ಲಿ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ ಎನ್ನಲಾಗಿದೆ. ವಿಶೇಷವಾಗಿ ಶಾಲೆ ಮತ್ತು ಕಾಲೇಜುಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಪಾನೀಯ ಮಾರಾಟವಾಗುತ್ತಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಂದ ವರದಿಗಳನ್ನು ಆಧರಿಸಿ ಮಕ್ಕಳ ಆಯೋಗ ಕ್ರಮ ಕೈಗೊಂಡಿದ್ದು, ಈ ಬಗ್ಗೆ ಪರಿಶೀಲನೆ ನಡೆಸುವಂತೆ ಔಷಧ ನಿಯಂತ್ರಣ ಇಲಾಖೆಗೆ ಪತ್ರ ಬರೆದು ಮುಕ್ತ ಮಾರಾಟಕ್ಕೆ ಅವಕಾಶ ನೀಡಿರುವ ಕುರಿತು ಸ್ಪಷ್ಟನೆ ಕೇಳಿದೆ.



