
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 2026-27ನೇ ಸಾಲಿನ ಬಜೆಟ್ನಲ್ಲಿ ಅಡಿಕೆ ಬೆಳೆಗಾರರಿಗೆ ಮಹತ್ವದ ಘೋಷಣೆ ಮಾಡಲಾಗಿದ್ದು, ಅಡಿಕೆ ಬೆಳೆಗೆ ಹಾನಿ ಉಂಟುಮಾಡುತ್ತಿರುವ ಎಲೆ ಚುಕ್ಕಿ, ಹಳದಿ ಎಲೆ ಹಾಗೂ ಕೊಳೆ ರೋಗಗಳ ನಿಯಂತ್ರಣಕ್ಕಾಗಿ ಅಧ್ಯಯನ ಚಟುವಟಿಕೆಗಳಿಗೆ 10 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ. ಈ ರೋಗಗಳು ಹಾಗೂ ತೆಂಗು ಬೆಳೆಯಲ್ಲಿ ಕಾಣಿಸಿಕೊಳ್ಳುವ ಕಪ್ಪು ತಲೆ ಹುಳು ಮತ್ತು ಬಿಳಿ ನೊಣಗಳ ನಿಯಂತ್ರಣಕ್ಕಾಗಿ ಕೃಷಿ ವಿಶ್ವವಿದ್ಯಾಲಯಗಳು ಮತ್ತು ಕೃಷಿ ವಿಜ್ಞಾನ ಕೇಂದ್ರಗಳ ಸಹಯೋಗದಲ್ಲಿ ಸಮುದಾಯ ಆಧಾರಿತ ಕೀಟ–ರೋಗ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ. ತೋಟಗಾರಿಕೆಯನ್ನು ರೈತರ ಆದಾಯ ಹೆಚ್ಚಿಸುವ ಪ್ರಮುಖ ಕ್ಷೇತ್ರವಾಗಿ ಅಭಿವೃದ್ಧಿಪಡಿಸುವ ಗುರಿಯೊಂದಿಗೆ ಉತ್ತಮ ಗುಣಮಟ್ಟದ ಹಾಗೂ ಮಾರುಕಟ್ಟೆ ಆಧಾರಿತ ಬೆಳೆಗಳಿಗೆ ಆದ್ಯತೆ ನೀಡಲಾಗುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ ಸುಮಾರು 89,000 ಹೆಕ್ಟೇರ್ ಪ್ರದೇಶದಲ್ಲಿ ಹೊಸ ತೋಟಗಾರಿಕೆ ಬೆಳೆಗಳನ್ನು ಅಳವಡಿಸಲಾಗಿದೆ. ಇದೇ ಅವಧಿಯಲ್ಲಿ 2.23 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹನಿ ನೀರಾವರಿ ವ್ಯವಸ್ಥೆ ಅಳವಡಿಕೆಯಾಗಿದ್ದು 2.36 ಲಕ್ಷ ರೈತರಿಗೆ ಇದರ ಪ್ರಯೋಜನ ದೊರೆತಿದೆ. ಬೆಳೆ ವಿಮೆ ಯೋಜನೆಯಡಿ 11 ಲಕ್ಷ ರೈತರಿಗೆ 2,378 ಕೋಟಿ ರೂಪಾಯಿ ಪರಿಹಾರ ನೀಡಲಾಗಿದ್ದು, 21,360 ಫಲಾನುಭವಿಗಳಿಗೆ 9,800 ಕೊಯ್ಲೋತ್ತರ ಘಟಕಗಳ ನಿರ್ಮಾಣಕ್ಕೂ ಸಹಾಯ ಮಾಡಲಾಗಿದೆ. ಇದಲ್ಲದೆ ತೋಟಗಾರಿಕೆ ಇಲಾಖೆಯ ಕ್ಷೇತ್ರಗಳು ಹಾಗೂ ನರ್ಸರಿಗಳಲ್ಲಿರುವ ಲಭ್ಯ ಜಮೀನನ್ನು ಬಳಸಿಕೊಂಡು ಉತ್ಕೃಷ್ಟ ಮೌಲ್ಯದ ತೋಟಗಳು, ಕೊಯ್ಲೋತ್ತರ ಸೌಲಭ್ಯಗಳು ಹಾಗೂ ತೋಟಗಾರಿಕೆ ಆಧಾರಿತ ಕೈಗಾರಿಕೆಗಳನ್ನು ಪಿಪಿಪಿ ಮಾದರಿಯಲ್ಲಿ ಸ್ಥಾಪಿಸಲು ಸರ್ಕಾರ ಯೋಜನೆ ರೂಪಿಸಿದೆ.




