
ಮಖಾನ ಬೀಜಗಳು ಆಹಾರ ಪದ್ಧತಿಯಲ್ಲಿ ಇದ್ದರೆ, ಅವುಗಳಿಂದ ದೊರೆಯುವ ಕ್ಯಾಲ್ಸಿಯಂ, ಪ್ರೋಟೀನ್, ನಾರು ಹಾಗೂ ಇತರ ಪೌಷ್ಟಿಕಾಂಶಗಳು ದೇಹದ ಮೂಳೆಗಳನ್ನು ಬಲಪಡಿಸುವುದರ ಜೊತೆಗೆ ಜೀರ್ಣಶಕ್ತಿ ಹೆಚ್ಚಿಸಲು ಸಹ ಸಹಾಯಕವಾಗುತ್ತವೆ. ದುರ್ಬಲ ಮೂಳೆ ಹೊಂದಿರುವವರು ಮಖಾನ ಸೇವನೆಯನ್ನು ದಿನಚರಿಯ ಒಂದು ಭಾಗವನ್ನಾಗಿ ಮಾಡಬಹುದು. ಬಾಯಿ ರುಚಿಗೆ ಮಾತ್ರವಲ್ಲದೆ, ಆರೋಗ್ಯ ಪ್ರಯೋಜನಗಳಿಗಾಗಿ ಮಖಾನ ಹೆಚ್ಚು ಪ್ರಸಿದ್ಧವಾಗಿದೆ. ಇನ್ನು ಅನಾನಸ್ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಪೊಟ್ಯಾಸಿಯಮ್ ಇರುತ್ತದೆ. ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಿದರೆ, ಪೊಟ್ಯಾಸಿಯಮ್ ದೇಹದ ಸಮತೋಲನ ಕಾಯ್ದುಕೊಳ್ಳಲು ನೆರವಾಗುತ್ತದೆ. ಮೂಳೆ ನೋವು ಅಥವಾ ಕ್ಯಾಲ್ಸಿಯಂ ಕೊರತೆಯಿಂದ ಬಳಲುವವರು ಅನಾನಸ್ ಸೇವಿಸಬಹುದಾಗಿದೆ. ಬಹುತೇಕ ಜನರು ಹಾಲು ಕುಡಿದರೆ ಮೂಳೆ ಬಲಗೊಳ್ಳುತ್ತವೆ ಎನ್ನುವ ನಂಬಿಕೆಯಲ್ಲಿ ಇದ್ದರೂ, ಮೊಸರಿನಲ್ಲಿ ಹಾಲಿಗಿಂತ ಹೆಚ್ಚಿನ ಕ್ಯಾಲ್ಸಿಯಂ ಇರುವುದನ್ನು ತಿಳಿದವರು ಕಡಿಮೆ. ದಿನನಿತ್ಯ ಹೆಚ್ಚು ಮೊಸರು ಸೇವಿಸುವ ಮೂಲಕ ಹೆಚ್ಚಿನ ಕ್ಯಾಲ್ಸಿಯಂ ಪಡೆಯಬಹುದು. ಇದೇ ರೀತಿ, ಬಾದಾಮಿಯಲ್ಲಿ ವಿಟಮಿನ್ ಇ, ಪ್ರೋಟೀನ್ ಹಾಗೂ ಕ್ಯಾಲ್ಸಿಯಂ ಒಟ್ಟಿಗೆ ಲಭ್ಯವಿದ್ದು, ಇದರಿಂದ ಮೆದುಳಿಗೆ ಚುರುಕು ಹಾಗೂ ಮೂಳೆಗಳಿಗೆ ಬಲ ದೊರೆಯುತ್ತದೆ. ನೆನೆಸಿದ ಬಾದಾಮಿ ಪ್ರತಿದಿನ ಸೇವಿಸುವುದು ಆರೋಗ್ಯಕ್ಕೆ ಹಿತಕರ. ಇದಲ್ಲದೆ, ಪಾಲಕ್ ಸೊಪ್ಪಿನಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ, ಫೈಬರ್ ಮತ್ತು ವಿಟಮಿನ್ ಎ ಅಂಶಗಳು ಇದ್ದು, ನಿಯಮಿತವಾಗಿ ಆಹಾರದಲ್ಲಿ ಬಳಸುವುದರಿಂದ ಮೂಳೆಗಳಿಗೆ ಶೇಕಡಾ 25ರಷ್ಟು ಕ್ಯಾಲ್ಸಿಯಂ ಲಭ್ಯವಾಗುತ್ತದೆ.