ತುಮಕೂರು: ತ್ರಿವಿಧ ದಾಸೋಹಿ, ನಡೆದಾಡುವ ದೇವರು ಎಂದೇ ಖ್ಯಾತರಾಗಿರುವ ಸಿದ್ದಗಂಗಾ ಮಠದ ಶಿವೈಕ್ಯ ಶಿವಕುಮಾರ ಮಹಾಶಿವಯೋಗಿಗಳ 119ನೇ ಜನ್ಮದಿನೋತ್ಸವ ಏಪ್ರಿಲ್ 1ರಂದು ಅದ್ದೂರಿಯಾಗಿ ನಡೆಯಲಿದೆ. ಈ ವಿಶೇಷ ಕಾರ್ಯಕ್ರಮಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮಿಸಲಿದ್ದು, ಬೆಳಗ್ಗೆ 10:30ಕ್ಕೆ ಮಠಕ್ಕೆ ಭೇಟಿ ನೀಡಲಿದ್ದಾರೆ.
ಆ ದಿನ ಪ್ರಾತಃಕಾಲದಲ್ಲಿ ಶ್ರೀಗಳ ಗದ್ದುಗೆಗೆ ವಿಶೇಷ ಪೂಜೆ ನಡೆಯಲಿದ್ದು, ವಿವಿಧ ಮಠಗಳ ಸಾಧು-ಸಂತರ ಮಂತ್ರಘೋಷಗಳ ನಡುವೆ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ. ಬಳಿಕ ರಾಷ್ಟ್ರಪತಿಗಳು ಗದ್ದುಗೆಗೆ ಆರತಿ ಸಲ್ಲಿಸಿ, ಮಠದಲ್ಲಿರುವ ಸುಮಾರು 10 ಸಾವಿರ ವಿದ್ಯಾರ್ಥಿಗಳೊಂದಿಗೆ ಚುಟುಕಾಗಿ ಸಂವಾದ ನಡೆಸಲಿದ್ದಾರೆ. ನಂತರ ಉದ್ದಾನಶ್ರೀ ವೇದಿಕೆಯಲ್ಲಿ ನಡೆಯುವ ಮುಖ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ರಾಷ್ಟ್ರಪತಿಗಳ ಆಗಮನದ ಹಿನ್ನೆಲೆ ಕಠಿಣ ಭದ್ರತಾ ವ್ಯವಸ್ಥೆ ಜಾರಿಗೊಂಡಿದ್ದು, ಭಕ್ತಾದಿಗಳು ವೇದಿಕೆ ಪ್ರದೇಶಕ್ಕೆ ನೀರಿನ ಬಾಟಲ್ ಹಾಗೂ ಕೊಡೆಗಳನ್ನು ತರಬಾರದು ಎಂದು ಮಠದ ವತಿಯಿಂದ ಮನವಿ ಮಾಡಲಾಗಿದೆ.
ಇದೇ ವೇಳೆ ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆ ದಿನವನ್ನು ‘ದಾಸೋಹ ದಿನ’ವನ್ನಾಗಿ ಘೋಷಿಸುವಂತೆ ಭಕ್ತಾದಿಗಳಿಂದ ಒತ್ತಾಯ ಕೇಳಿಬಂದಿದ್ದು, ಕೇಂದ್ರ ಸಚಿವ ವಿ. ಸೋಮಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಕುರಿತು ಪತ್ರ ಬರೆದಿದ್ದಾರೆ. ವಿದ್ಯಾರ್ಥಿಗಳ ಪರೀಕ್ಷೆ ಹಿನ್ನೆಲೆ ಕಾರ್ಯಕ್ರಮವನ್ನು ಸರಳವಾಗಿ ಆಯೋಜಿಸಲು ಮಠ ನಿರ್ಧರಿಸಿದ್ದು, ಸುಮಾರು 1 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಭಾಗವಹಿಸುವ ನಿರೀಕ್ಷೆ ಇದೆ.
