
ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲೂಕಿನ ಗೋಣಿಬೀಡು ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ‘ಭೀಮ’ ಎಂದು ಕರೆಯಲಾಗುತ್ತಿರುವ ಕಿವಿ ಹರಿದ ಹಾಗೂ ಒಂದು ಕೊಂಬು ಮುರಿದಿರುವ ಕಾಡಾನೆ ತನ್ನ ಹಿಂಡಿನೊಂದಿಗೆ ಕಾಫಿ ತೋಟಗಳಲ್ಲಿ ನಿರ್ಭಯವಾಗಿ ಸಂಚರಿಸುತ್ತಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ತನ್ನ ದಾರಿಯಲ್ಲಿ ಎದುರಾದ ತೋಟಗಳ ಬೇಲಿಗಳನ್ನು ಧ್ವಂಸಗೊಳಿಸುತ್ತಿರುವ ಭೀಮನ ಗಜಗಾಂಭೀರ್ಯ ನಡೆ ಹಾಗೂ ಆಕ್ರಮಣಕಾರಿ ನೋಟ ಕಂಡು ಜನರು ಭಯಭೀತರಾಗಿದ್ದಾರೆ. ಆನೆಗಳನ್ನು ಕಾಡಿಗೆ ಹಿಮ್ಮೆಟ್ಟಿಸಲು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿದ್ದರೂ, ಆನೆಗಳ ಹಿಂಡು ಯಾವುದೇ ತಲೆಕೆಡಿಸಿಕೊಳ್ಳದೇ ತೋಟ ಪ್ರದೇಶದಲ್ಲೇ ಬೀಡು ಬಿಟ್ಟಿದೆ.




