ಬೆಂಗಳೂರು: ಟ್ರಾಫಿಕ್ ಸಮಸ್ಯೆ ಇದೀಗ ವಿಶ್ವಮಟ್ಟದಲ್ಲಿ ಮತ್ತೆ ಗಮನ ಸೆಳೆದಿದ್ದು, ನೆದರ್ಲೆಂಡ್ಸ್ ಮೂಲದ ‘ಟಾಮ್ಟಾಮ್’ ಸಂಸ್ಥೆ ಬಿಡುಗಡೆ ಮಾಡಿದ 2025ರ ಟ್ರಾಫಿಕ್ ಇಂಡೆಕ್ಸ್ ವರದಿ ಪ್ರಕಾರ ವಿಶ್ವದಲ್ಲೇ ಅತಿಹೆಚ್ಚು ಸಂಚಾರ ದಟ್ಟಣೆ ಹೊಂದಿರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಎರಡನೇ ಸ್ಥಾನ ಪಡೆದಿದೆ. ಮೆಕ್ಸಿಕೊ ನಗರ ಮೊದಲ ಸ್ಥಾನದಲ್ಲಿದ್ದರೆ, ಸಿಲಿಕಾನ್ ಸಿಟಿ ಬೆಂಗಳೂರು ಶೇ.74.4ರಷ್ಟು ಸಂಚಾರ ದಟ್ಟಣೆಯೊಂದಿಗೆ ಎರಡನೇ ಸ್ಥಾನದಲ್ಲಿದೆ; ಇದು 2024ರ ಶೇ.72.7ರೊಂದಿಗೆ ಹೋಲಿಸಿದರೆ ಒಂದೇ ವರ್ಷದಲ್ಲಿ ಶೇ.1.7ರಷ್ಟು ಹೆಚ್ಚಳವಾಗಿದೆ. ವಾಹನಗಳ ಸಂಖ್ಯೆ ಹೆಚ್ಚಳ, ರಸ್ತೆ ಮೂಲಸೌಕರ್ಯದ ಮೇಲೆ ಬಿದ್ದಿರುವ ಭಾರ ಮತ್ತು ನಿರಂತರ ಕಾಮಗಾರಿಗಳು ಸಂಚಾರ ಸಮಸ್ಯೆ ತೀವ್ರಗೊಳ್ಳಲು ಪ್ರಮುಖ ಕಾರಣಗಳಾಗಿವೆ ಎನ್ನಲಾಗಿದೆ. 2025ರಲ್ಲಿ ವಾಹನಗಳ ಸರಾಸರಿ ವೇಗ ಗಂಟೆಗೆ 17.6 ಕಿಲೋಮೀಟರ್ಗೆ ಏರಿಕೆಯಾದರೂ ಸಂಚಾರದ ಒತ್ತಡ ಕಡಿಮೆಯಾಗಿಲ್ಲ; 15 ನಿಮಿಷಗಳಲ್ಲಿ ಸರಾಸರಿ 4.4 ಕಿಲೋಮೀಟರ್ ಮಾತ್ರ ಸಂಚರಿಸಬಹುದಾಗಿದೆ. ವರದಿ ಪ್ರಕಾರ, ಬೆಂಗಳೂರಿನಲ್ಲಿ 10 ಕಿಲೋಮೀಟರ್ ಪ್ರಯಾಣಕ್ಕೆ ಸರಾಸರಿ 36 ನಿಮಿಷ 9 ಸೆಕೆಂಡ್ ಸಮಯ ಬೇಕಾಗುತ್ತಿದ್ದು, ಇದು ದಿನನಿತ್ಯದ ಪ್ರಯಾಣಿಕರಿಗೆ ದೊಡ್ಡ ತಲೆನೋವಾಗುತ್ತಿದೆ. ಈ ಪಟ್ಟಿಯಲ್ಲಿ ದುಬೈ ಮೂರನೇ, ಪೊಲ್ಯಾಂಡ್ನ ಲೊಡ್ಜ್ ನಾಲ್ಕನೇ ಸ್ಥಾನದಲ್ಲಿದ್ದರೆ, ಭಾರತದ ಪುಣೆ ಐದನೇ ಸ್ಥಾನ ಪಡೆದಿದ್ದು, ಮುಂಬೈ 18ನೇ ಸ್ಥಾನದಲ್ಲಿದೆ.
