
ಒಬ್ಬ ವ್ಯಕ್ತಿಗೆ ಬೊಜ್ಜು ಇರುವುದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುವ ಆಹಾರಗಳಲ್ಲಿ ಬಾದಾಮಿ ಪ್ರಮುಖವಾಗಿದೆ ಎಂಬುದನ್ನು ಇತ್ತೀಚಿನ ಸಂಶೋಧನೆ ಒಂದು ಪ್ರತಿಪಾದಿಸಿದೆ. ‘ಫ್ರಾಂಟಿಯರ್ಸ್ ಇನ್ ನ್ಯೂಟ್ರಿಷನ್’ ಮತ್ತು ‘ಕರಂಟ್ ಡೆವಲಪ್ಮೆಂಟ್ಸ್ ಇನ್ ನ್ಯೂಟ್ರಿಷನ್’ ಎಂಬ ಜರ್ನಲ್ಗಳಲ್ಲಿ ಪ್ರಕಟವಾದ ಈ ಅಧ್ಯಯನವು, ಪ್ರತಿದಿನ 12 ವಾರಗಳ ಕಾಲ ಬಾದಾಮಿ ಸೇವಿಸಿದವರಿಗೆ ದೇಹದ ತೂಕ, ಬಾಡಿ ಮಾಸ್ ಇಂಡೆಕ್ಸ್ (BMI), ಕೊಲೆಸ್ಟ್ರಾಲ್ ಮಟ್ಟ, ಇನ್ಸುಲಿನ್ ಪ್ರತಿರೋಧ, ಹಾಗೂ ಗ್ಲೂಕೋಸ್ ನಿಯಂತ್ರಣದಲ್ಲಿ ಉಲ್ಲೇಖನೀಯ ಸುಧಾರಣೆ ಕಂಡುಬಂದಿದೆ ಎಂಬುದನ್ನು ವಿವರಿಸುತ್ತದೆ. ಚೆನ್ನೈನ ಮದ್ರಾಸ್ ಡಯಾಬಿಟಿಸ್ ರಿಸರ್ಚ್ ಫೌಂಡೇಶನ್ ಅಧ್ಯಕ್ಷ ಡಾ. ವಿಶ್ವನಾಥನ್ ಮೋಹನ್ ನೇತೃತ್ವದ ಈ ಅಧ್ಯಯನವು 25 ರಿಂದ 65 ವಯಸ್ಸಿನ ನಡುವೆ ಇರುವ 400 ಜನ ಬೊಜ್ಜು ವ್ಯಕ್ತಿಗಳ ಮೇಲೆ ನಡೆಯಿತು. ಅಧ್ಯಯನದಲ್ಲಿ ಭಾಗವಹಿಸಿದವರು ಬಾದಾಮಿ ಸೇವನೆಯಿಂದ ಮೆದೋಜ್ಜೀರಕ ಗ್ರಂಥಿಯ ಕಾರ್ಯಕ್ಷಮತೆ, ಬೀಟಾ ಕೋಶಗಳ ಚಟುವಟಿಕೆ ಮತ್ತು ಗ್ಲೂಕೋಸ್ ಚಯಾಪಚಯದಲ್ಲಿ ಸುಧಾರಣೆ ತೋರಿಸಿದರು. ಬಾದಾಮಿಯಲ್ಲಿ 6 ಗ್ರಾಂ ಸಸ್ಯಪ್ರೋಟೀನ್ (28 ಗ್ರಾಂ ಸೇವನೆಯಲ್ಲಿ), ಉತ್ತಮ ಕೊಬ್ಬಿನಾಮ್ಲಗಳು, ವಿಟಮಿನ್ ಇ ಸೇರಿದಂತೆ ಹಲವಾರು ಪೌಷ್ಟಿಕಾಂಶಗಳು ಇರುವುದರಿಂದ ಇದು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯಮಾಡುತ್ತದೆ. ದಿನಕ್ಕೆ ಎರಡು ಬಾರಿ ಬಾದಾಮಿ ಸೇವಿಸುವುದರಿಂದ LDL (ಕೆಟ್ಟ ಕೊಲೆಸ್ಟ್ರಾಲ್) ಹತ್ತುಟು ಸುಮಾರು 5 ಯೂನಿಟ್ಗಳಷ್ಟು ಹಾಗೂ ಡಯಾಸ್ಟೊಲಿಕ್ ರಕ್ತದೊತ್ತಡ 0.17-1.3 mmHg ರಷ್ಟು ಇಳಿಕೆಯಾಗಿದೆ ಎಂದು ಕಂಡುಬಂದಿದೆ. ಜೊತೆಗೆ ಟ್ರೈಗ್ಲಿಸರೈಡ್ ಮಟ್ಟವೂ ಸುಧಾರಿಸಿದೆ. ಈ ಎಲ್ಲಾ ಅಂಶಗಳಿಂದಾಗಿ ಬಾದಾಮಿ ತಿನ್ನುವುದು ಬೊಜ್ಜು, ಮಧುಮೇಹ ಮತ್ತು ಹೃದಯ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಕಾರಿ ಎನಿಸಬಹುದಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.