ಚಿಕ್ಕಮಗಳೂರು: ತರೀಕೆರೆ ತಾಲೂಕಿನ ಲಕ್ಕವಳ್ಳಿ ಗ್ರಾಮದ ಬಳಿ ಕರಡಿಯೊಂದು ಸುಮಾರು 2 ಕಿ.ಮೀ. ದೂರ ರಸ್ತೆಯಲ್ಲಿ ಓಡಾಡಿ ಸ್ಥಳೀಯರಲ್ಲಿ ಭೀತಿ ಮೂಡಿಸಿದೆ. ತರೀಕೆರೆ-ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ ಕಾಣಿಸಿಕೊಂಡ ಕರಡಿ, ಅಟ್ಟಿಸಿಕೊಂಡು ಬಂದ ನಾಯಿಗಳನ್ನು ಹೆದರಿಸಿ ಓಡಿಸಿದರೆ, ಮನೆ ಬಾಗಿಲಲ್ಲಿದ್ದ ಮಗುವನ್ನು ಮುಟ್ಟದೇ ಪಕ್ಕದಲ್ಲೇ ಹಾದು ಹೋಗಿದೆ. ಕುವೆಂಪು ವಿಶ್ವವಿದ್ಯಾನಿಲಯದಿಂದ ತುಸು ದೂರದಲ್ಲೇ ಈ ಘಟನೆ ನಡೆದಿದ್ದು, ಬೈಕ್ ಸವಾರರು ಭಯದಿಂದ ರಸ್ತೆಯುದ್ದಕ್ಕೂ ಹಾರನ್ ಹಾಕುತ್ತಲೇ ಸಂಚರಿಸಿದರು. ಬಳಿಕ ಕರಡಿ ಅರಣ್ಯದ ಅಂಚಿನಲ್ಲಿ ಕಣ್ಮರೆಯಾಗಿದ್ದು, ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕರಡಿಯನ್ನು ತಕ್ಷಣ ಸೆರೆಹಿಡಿದು ಸ್ಥಳಾಂತರಿಸಬೇಕೆಂದು ಹಳ್ಳಿಗರು ಆಗ್ರಹ ವ್ಯಕ್ತಪಡಿಸಿದ್ದು, ಲಕ್ಕವಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕದಲ್ಲಿ ಜೀವನ ನಡೆಸುತ್ತಿದ್ದಾರೆ.
