
ಬೆಂಗಳೂರು: ಬೆಂಗಳೂರು ನಗರದಲ್ಲಿ ಬಹುನಿರೀಕ್ಷಿತ ಬಿಬಿಎಂಪಿ ಚುನಾವಣೆ ಕುರಿತು ಕೊನೆಗೂ ಸ್ಪಷ್ಟತೆ ದೊರಕಿದ್ದು, ಡಿಸೆಂಬರ್ನೊಳಗೆ ಚುನಾವಣೆ ನಡೆಯುವ ಸಾಧ್ಯತೆ ಹೆಚ್ಚು ಇದೆ. ಕಳೆದ ಆರು ವರ್ಷಗಳಿಂದ ಮುಂದೂಡಲ್ಪಟ್ಟ ಈ ಚುನಾವಣೆ ಕುರಿತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳಿಗೆ ಮಹತ್ವದ ಮಾಹಿತಿ ನೀಡಿದ್ದು, ಡಿಸೆಂಬರ್ 1ರ ಒಳಗೆ ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಐದು ಪಾಲಿಕೆಗಳ ಚುನಾವಣೆಗೆ ಸಿದ್ಧತೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ. ವಾಟರ್ ಲಿಸ್ಟ್ ತಯಾರಿ, ವಾರ್ಡ್ ಮರುವಿಂಗಡನೆ, ಸಾರ್ವಜನಿಕ ಆಕ್ಷೇಪಣೆ ಸೇರಿದಂತೆ ಎಲ್ಲ ಕ್ರಮಗಳು ಡಿಸೆಂಬರ್ ಮೊದಲರೊಳಗೆ ಮುಕ್ತಾಯಗೊಳ್ಳಬೇಕೆಂದು ಅವರು ಸೂಚಿಸಿದ್ದಾರೆ. ಶಾಸಕರೊಂದಿಗೆ ಚರ್ಚಿಸಿ ಐದು ಪಾಲಿಕೆಗಳನ್ನು ರಚನೆ ಮಾಡುವ ತಯಾರಿ ನಡೆಯುತ್ತಿದ್ದು, ಎಲ್ಲ ಕ್ಷೇತ್ರಗಳಲ್ಲಿ ಬಿಎಲ್ಎ ನೇಮಕ ಪ್ರಕ್ರಿಯೆ ಆರಂಭವಾಗಿದೆ. ಚುನಾವಣೆ ಸ್ಪರ್ಧೆಗೆ ಆಸಕ್ತಿ ತೋರಿದವರಿಗೆ ಅವಕಾಶ ನೀಡಲಾಗುವುದು; ಆಸಕ್ತಿ ಇಲ್ಲದವರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ. ಜೊತೆಗೆ ಎಲ್ಲಾ ಬೂತ್ಗಳಲ್ಲಿ ಮತದಾರರ ಹೆಸರು ಸೇರಿಸುವ ಕಾರ್ಯಕ್ಕೆ ಶ್ರಮಿಸಬೇಕು ಎಂಬ ಸಂದೇಶವನ್ನೂ ನೀಡಿದ್ದಾರೆ. ಇನ್ನು ಸಮುದಾಯ ಮತ್ತು ಜಾತಿ ಗಣತಿ ಕುರಿತಾಗಿ ಪಕ್ಷದ ಕಾರ್ಯಕರ್ತರು ಸಕ್ರಿಯರಾಗಬೇಕು ಎಂಬ ರಾಹುಲ್ ಗಾಂಧಿಯವರ ಸೂಚನೆಯ ಹಿನ್ನೆಲೆಯಲ್ಲಿ, ತೆಲಂಗಾಣ ಮಾದರಿಯಲ್ಲಿ ಸಮೀಕ್ಷೆ ನಡೆಸುವ ಯೋಜನೆಯೂ ಕೈಗೊಳ್ಳಲಾಗಿದೆ. ಈ ಕುರಿತು ಸಮಿತಿಯನ್ನು ನೇಮಕ ಮಾಡಲಾಗಿದ್ದು, 22ರಿಂದ ಕಾರ್ಯ ಆರಂಭವಾಗಲಿದೆ. ಎಲ್ಲಾ ಸಮುದಾಯಗಳಿಗೆ ನ್ಯಾಯ ಒದಗಿಸುವುದು ಕಾಂಗ್ರೆಸ್ನ ಉದ್ದೇಶವೆಂದು ಉಪಮುಖ್ಯಮಂತ್ರಿಯವರು ಸ್ಪಷ್ಟಪಡಿಸಿದ್ದಾರೆ.