
ಕೊಟ್ಟಿಗೆಹಾರ: ಸಮೀಪದ ಬಣಕಲ್ ಹೋಬಳಿಯ ಬಾನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ರಾಜ್ಯ ಮಟ್ಟದಲ್ಲಿ ಅತ್ಯುತ್ತಮ ಎಸ್ಡಿಎಂಸಿ ಪುಷ್ಟಿ ಶಾಲೆಯಾಗಿ ಆಯ್ಕೆಯಾಗಿದ್ದು, ಇದೇ ಶಾಲೆಯ ಶಿಕ್ಷಕಿ ಇಂಪಾ ಸವಿನ್ ಅವರಿಗೆ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಲಭಿಸಿದೆ. ಈ ಕುರಿತು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ತಾಲ್ಲೂಕು ಅಧ್ಯಕ್ಷ ಆರ್. ಪ್ರಕಾಶ್ ಮಾಹಿತಿ ನೀಡಿ ಮಾತನಾಡಿ, ಎಸ್ಡಿಎಂಸಿ ಪುಷ್ಟಿ ಕಾರ್ಯಕ್ರಮಕ್ಕಾಗಿ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು ಒಟ್ಟು ಒಂಬತ್ತು ಶಾಲೆಗಳು ಆಯ್ಕೆಯಾಗಿದ್ದವು ಎಂದು ಹೇಳಿದರು. ಈ ಶಾಲೆಗಳನ್ನು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಮೂರು ಸಮಿತಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ರಾಜ್ಯ ಮಟ್ಟಕ್ಕೆ ವರದಿ ಸಲ್ಲಿಸಿದ ಬಳಿಕ ಬಾನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಈ ಬಾರಿ ಅತ್ಯುತ್ತಮ ಎಸ್ಡಿಎಂಸಿ ಪುಷ್ಟಿ ಶಾಲೆಯಾಗಿ ಆಯ್ಕೆಯಾಗಿದೆ ಎಂದು ತಿಳಿಸಿದರು. ಅಲ್ಲದೆ ಈ ಶಾಲೆಯ ಶಿಕ್ಷಕಿ ಇಂಪಾ ಸವಿನ್ ಅವರಿಗೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ವತಿಯಿಂದ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ಲಭಿಸಿರುವುದು ತಾಲ್ಲೂಕಿಗೆ ಹೆಮ್ಮೆಯ ವಿಷಯವಾಗಿದೆ ಎಂದರು. ಶಾಲಾ ಸಮಿತಿಯ ಅಧ್ಯಕ್ಷ ದಿನೇಂದ್ರ ಮಾತನಾಡಿ, ಶಾಲಾ ಸಮಿತಿಯ ಸದಸ್ಯರು, ಪೋಷಕರು ಹಾಗೂ ಶಿಕ್ಷಕರ ಒಗ್ಗಟ್ಟಿನ ಪ್ರಯತ್ನದಿಂದ ಶಾಲೆಯ ಅಭಿವೃದ್ಧಿಗೆ ಸಾಧ್ಯವಾಗಿದ್ದು ಅದರಿಂದಲೇ ಈ ಗೌರವ ದೊರೆತಿದೆ ಎಂದು ತಿಳಿಸಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಎಸ್ಡಿಎಂಸಿ ಮಾಜಿ ಅಧ್ಯಕ್ಷ ಆರ್. ಶ್ರೀಧರ್, ಮಾಜಿ ಉಪಾಧ್ಯಕ್ಷೆ ಅಮಿತಾ, ಪ್ರಸ್ತುತ ಉಪಾಧ್ಯಕ್ಷೆ ತೇಜಸ್ವಿನಿ ಪ್ರಸಾದ್, ಸವಿನ್ ಕುಮಾರ್, ರವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.




