
ಕೊಪ್ಪಳ:ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಮುಷ್ಟೂರಿನ ಬಳಿ ಇರುವ ಬರಗಾಲ ಸಿದ್ದಪ್ಪ ಮಠದ ಆವರಣದಲ್ಲಿ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬಾದ್ಯಪುರದ ಅವಧೂತ ಶ್ರೀ ಸಚ್ಚಿದಾನಂದ ಸ್ವಾಮೀಜಿ ಅವರು ಲೋಕ ಕಲ್ಯಾಣಕ್ಕಾಗಿ ವಿಶಿಷ್ಟ ರೀತಿಯಲ್ಲಿ ಧ್ಯಾನದಲ್ಲಿ ತೊಡಗಿದ್ದಾರೆ. ಈ ಶ್ರೀಮಾತಾ ಈಗ ಮಾವಿನ ಮರದ ಮೇಲೆ ಗೂಡು ಕಟ್ಟಿಕೊಂಡು ದಿನವಿಡೀ ಮೌನವ್ರತದಲ್ಲಿದ್ದು, ದಿನಕ್ಕೆ ಕೇವಲ ಒಂದು ಬಾರಿ ಮಾತ್ರ ಹಾಲು ಸೇವಿಸುತ್ತಿದ್ದಾರೆ. ಇತರ ಆಹಾರವಸ್ತುಗಳನ್ನು ಸಂಪೂರ್ಣವಾಗಿ ತ್ಯಜಿಸಿದ್ದಾರೆ. ಅವರು ಈ ಧ್ಯಾನವನ್ನು ನಿರಂತರವಾಗಿ 101 ದಿನಗಳವರೆಗೆ ಮುಂದುವರಿಸುವ ನಿರ್ಧಾರ ಹೊಂದಿದ್ದು, ಇದಕ್ಕೂ ಮೊದಲು 2012ರಲ್ಲಿ ಆಲದ ಮರದ ಮೇಲೆ ಇಂತಹದ್ದೇ ಧ್ಯಾನದಲ್ಲಿ ತೊಡಗಿದಾಗ, ಅವರ ಆ ಕ್ರಮ ದೇಶಾದ್ಯಂತ ಸುದ್ದಿಯಾಗಿದೆ. ಈಗ ಮತ್ತೆ ಕೊಪ್ಪಳ ಜಿಲ್ಲೆಯ ಈ ಪವಿತ್ರ ಸ್ಥಳದಲ್ಲಿ ಮರದ ಮೇಲೆ ಕುಳಿತು ತಮ್ಮ ಧ್ಯಾನ ಸಾಧನೆಯಲ್ಲಿ ತೊಡಗಿರುವ ಇವರ ವಿಶಿಷ್ಟ ವೈರಾಗ್ಯಮಯ ಜೀವನಶೈಲೆಯು ಭಕ್ತರಲ್ಲಿ ಆಶ್ಚರ್ಯ ಮತ್ತು ಭಕ್ತಿ ಉಂಟುಮಾಡುತ್ತಿದೆ.