ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನ ಬೈರಾಪುರದಲ್ಲಿ ಓರ್ವ ಬಾಲಕಿಯನ್ನು ಬಲಿ ಪಡೆದು ಮತ್ತೋರ್ವ ಬಾಲಕನ ಮೇಲೆ ದಾಳಿ ಮಾಡಿದ್ದ ಚಿರತೆಯನ್ನು ಸೆರೆಹಿಡಿಯುವ ವೇಳೆ ಅರಣ್ಯಾಧಿಕಾರಿಗಳು ಆತ್ಮರಕ್ಷಣೆಗೆ ಗುಂಡು ಹಾರಿಸಿದ ಪರಿಣಾಮ ಚಿರತೆ ಸಾವನ್ನಪ್ಪಿದ ಘಟನೆ ನಡೆದಿದೆ. ಇದನ್ನು ಅಧಿಕಾರಿಗಳ ನಿರ್ಲಕ್ಷ್ಯಪೂರ್ಣ ಕ್ರಮವೆಂದು ಪ್ರಾಣಿಪ್ರಿಯರು ಮತ್ತು ಪರಿಸರವಾಧಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಲಕನ ಮೇಲೆ ದಾಳಿ ನಡೆಸಿದ ಚಿರತೆಯನ್ನು ಸೆರೆಹಿಡಿಯುವ ಕಾರ್ಯಾಚರಣೆ ಆರಂಭವಾಗಿತ್ತು, ಆದರೆ ಆ ಶೋಧದ ವೇಳೆ ಚಿರತೆ ಆಕಸ್ಮಿಕವಾಗಿ ಹಾರಿದ್ದು ಅಧಿಕಾರಿಗಳು ಜೀವ ಉಳಿಸಿಕೊಳ್ಳಲು ಗುಂಡು ಹಾರಿಸಿದ ಪರಿಣಾಮ ಚಿರತೆ ಮೃತಪಟ್ಟಿದೆ. ಇತ್ತೀಚೆಗೆ ಈ ಭಾಗದಲ್ಲಿ ಚಿರತೆ ದಾಳಿಗಳು ಹೆಚ್ಚುತ್ತಿರುವುದರಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.
