
ಚಿಕ್ಕಮಗಳೂರು: ಇರಾನ್ ಮತ್ತು ಇಸ್ರೇಲ್ ನಡುವಿನ ತೀವ್ರ ಸಂಘರ್ಷದಿಂದ ಮಧ್ಯಪ್ರಾಚ್ಯದಲ್ಲಿ ಯುದ್ಧಭೀತಿ ಹೆಚ್ಚಾಗಿರುವ ಹಿನ್ನೆಲೆ ವಾಯುಯಾನ ಸೇವೆಗಳು ಸ್ಥಗಿತಗೊಂಡಿದ್ದು, ಹಲವಾರು ಭಾರತೀಯರು ಸಿಲುಕಿರುವ ಸಂದರ್ಭದಲ್ಲೇ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹಿರೇಕೊಡಿಗೆ ನಿವಾಸಿ ನಿಶ್ಚಿತ್ ಎಂಬ ಯುವಕ ಇರಾನ್ನಲ್ಲಿ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಬದುಕು ಕಟ್ಟಿಕೊಳ್ಳಲು ಸುಮಾರು ಆರು ತಿಂಗಳ ಹಿಂದೆ ಇರಾನ್ಗೆ ತೆರಳಿದ್ದ ನಿಶ್ಚಿತ್ ಮರ್ಚೆಂಟ್ ನೇವಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಐದು ತಿಂಗಳ ಹಿಂದಷ್ಟೇ ಅಲ್ಲಿನ ಉದ್ಯೋಗ ಆರಂಭಿಸಿದ್ದಾನೆ ಎನ್ನಲಾಗಿದೆ. ಕಳೆದ ಎಂಟು ದಿನಗಳ ಹಿಂದೆ ತಂದೆ ಮಹೇಶ್ ಅವರಿಗೆ ಕೊನೆಯ ಬಾರಿ ಫೋನ್ ಮಾಡಿದ್ದ ನಿಶ್ಚಿತ್, ಒಂದು ವಾರದ ಹಿಂದೆ ಇರಾನ್ನಿಂದ ಕುವೈಟ್ಗೆ ತೆರಳುವುದಾಗಿ ತಿಳಿಸಿದ್ದಾನೆ ಎನ್ನಲಾಗಿದ್ದು, ಆ ಬಳಿಕ ಯಾವುದೇ ಸಂಪರ್ಕ ಸಾಧಿಸದೇ ಇರುವುದರಿಂದ ಪೋಷಕರು ತೀವ್ರ ಆತಂಕಗೊಂಡಿದ್ದಾರೆ. ಯುದ್ಧಪೀಡಿತ ಪರಿಸ್ಥಿತಿಯ ನಡುವೆ ಮಗನಿಂದ ಫೋನ್ ಬಾರದೇ ಸುಳಿವು ಸಿಗದ ಕಾರಣ ಕುಟುಂಬ ಕಂಗಾಲಾಗಿದ್ದು, ನಿಶ್ಚಿತ್ ಇರಾನ್ನಲ್ಲೇ ಇದ್ದಾನೋ ಅಥವಾ ಕುವೈಟ್ಗೆ ತೆರಳಿದಾನೋ ಎಂಬ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಮಗನ ಪತ್ತೆಗೆ ಕೇಂದ್ರ ಸರ್ಕಾರ ನೆರವು ನೀಡಬೇಕು ಎಂದು ತಂದೆ ಮಹೇಶ್ ಮನವಿ ಮಾಡಿಕೊಂಡಿದ್ದಾರೆ.



