ತರೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರೀತಿ–ಪ್ರೇಮ ಸಂಬಂಧಿತ ವಿಚಾರಕ್ಕೆ ಸಂಬಂಧಿಸಿದಂತೆ 21 ವರ್ಷದ ಮಂಜುನಾಥ್ ಎಂಬ ಯುವಕನ ಹತ್ಯೆ ನಡೆದಿದೆ. ಪರಿಚಯವಿದ್ದ ಯುವತಿಗೆ ಮಂಜುನಾಥ್ ಪದೇ ಪದೇ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದ್ದು, ಆ ಯುವತಿಗೆ ಈಗಾಗಲೇ ಬೇರೊಬ್ಬನೊಂದಿಗೆ ಎಂಗೇಜ್ಮೆಂಟ್ ಆಗಿದ್ದು, ಮೆಸೇಜ್ ಮಾಡಬೇಡಿ ಎಂದು ಯುವತಿ ಮನವಿ ಮಾಡಿದರೂ ಆತ ಕೇಳದ ಹಿನ್ನೆಲೆಯಲ್ಲಿ ಆಕೆ ತನ್ನನ್ನು ಮದುವೆಯಾಗಲಿರುವ ವೇಣು ಎಂಬ ಯುವಕನಿಗೆ ವಿಷಯ ತಿಳಿಸಿದ್ದಾಳೆ. ಬಳಿಕ ವೇಣು ತನ್ನ ಸ್ನೇಹಿತರ ಜೊತೆ ಸೇರಿ ಮಂಜುನಾಥ್ ಒಡನೆ ಜಗಳವಾಡಿದ್ದು, ನಂತರ ಚಾಕುವಿನಿಂದ ಇರಿದು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಮಂಜುನಾಥ್ ಶಿವಮೊಗ್ಗದ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾನೆ. ಈ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
