
ಬೆಂಗಳೂರು, ಆಗಸ್ಟ್ 08: ಅಭಿವೃದ್ಧಿಯತ್ತ ಸಾಗುತ್ತಿರುವ ಮಹಾನಗರಿ ಬೆಂಗಳೂರು, ಮಳೆಗಾಲ ಬಂದಾಗಲೆಲ್ಲಾ ಗುಂಡಿಬಿದ್ದ ರಸ್ತೆಗಳ ಸಮಸ್ಯೆಯಿಂದ ಬಳಲುತ್ತಿದೆ. ವರ್ತೂರು ಬಳಿಯ ಬಾಳಗೆರೆಯ ನಿವಾಸಿಗಳು ಈ ಸಮಸ್ಯೆಯನ್ನು ಹೈಲೈಟ್ ಮಾಡಲು ವಿಶಿಷ್ಟ ರೀತಿಯ ಪ್ರತಿಭಟನೆ ನಡೆಸಿದರು. ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಯ ಬಿತ್ತಿಪತ್ರಗಳನ್ನು ಹಿಡಿದು, “ನಮ್ಮ ತೆರಿಗೆ ಹಣವನ್ನು ವಾಪಸ್ ಕೊಡಿ, ನಾವೇ ಬೆಂಗಳೂರನ್ನು ಅಭಿವೃದ್ಧಿಪಡಿಸುತ್ತೇವೆ” ಎಂದು ಬೇಡಿಕೆ ಇಟ್ಟರು. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋದಲ್ಲಿ ಸಂಚಾರ ದಟ್ಟಣೆ, ಗುಂಡಿ ರಸ್ತೆಗಳು, ಅಭಿವೃದ್ಧಿ ಯೋಜನೆಗಳಲ್ಲಿ ವಿಳಂಬ – ಇವುಗಳಿಂದ ತತ್ತರಿಸಿದ ನಾಗರಿಕರು ಸರ್ಕಾರ ಮತ್ತು ಬಿಬಿಎಂಪಿಯ ವೈಫಲ್ಯವನ್ನು ಪ್ರಶ್ನಿಸುತ್ತಿರುವುದು ಕಾಣಿಸುತ್ತದೆ. “ನಾವು ತೆರಿಗೆ ಕಟ್ಟುತ್ತೇವೆ, ಎಲ್ಲಾ ಭಾಷೆಗಳಲ್ಲಿ ಮಾತನಾಡುತ್ತೇವೆ, ಆದರೆ ಪ್ರತಿಫಲವಾಗಿ ಸಿಗುತ್ತಿರುವುದು ಪ್ರವಾಹದ ರಸ್ತೆಗಳು ಮತ್ತು ಅಸಮರ್ಪಕ ಮೂಲಸೌಕರ್ಯ. ನಿಮಗೆ ಅಭಿವೃದ್ಧಿ ಮಾಡಲು ಸಾಧ್ಯವಿಲ್ಲದಿದ್ದರೆ, ನಮ್ಮ ಹಣವನ್ನು ನಮಗೆ ಹಿಂದಿರಿಸಿ” ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.