
ಶೃಂಗೇರಿ: ಕರಾವಳಿ ಕರ್ನಾಟಕವು ಯಕ್ಷಗಾನ, ನಾಗಾರಾಧನೆ, ಭೂತಾರಾಧನೆ ಸೇರಿದಂತೆ ಅನೇಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಆಚರಣೆಗಳಿಗೆ ಪ್ರಸಿದ್ಧವಾಗಿದೆ. ಅದೇ ರೀತಿಯಲ್ಲಿ ಮರಾಠಿ ಸಮುದಾಯದವರು ಆಚರಿಸುವ ಹೋಳಿ ಹಬ್ಬವೂ ವಿಶಿಷ್ಟ ಸ್ಥಾನ ಹೊಂದಿದೆ. ಮಹಾರಾಷ್ಟ್ರದಿಂದ ವಲಸೆ ಬಂದ ಮರಾಠಿ ಜನಾಂಗದವರ ಈ ಹೋಳಿ ಆಚರಣೆ ವಿಶೇಷ ಪರಂಪರೆಯನ್ನು ಹೊಂದಿದ್ದು, ಉಡುಪಿ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಶೃಂಗೇರಿ ತಾಲ್ಲೂಕಿನ ಕೆಸರುಕೊಡಿಗೆ ಮತ್ತು ಹಂಚಿರಿಕೆ ಗ್ರಾಮಗಳಲ್ಲಿಯೂ ಈ ಸಂಪ್ರದಾಯ ಇಂದಿಗೂ ಜೀವಂತವಾಗಿದ್ದು, ಅತಿ ಕಡಿಮೆ ಪ್ರದೇಶಗಳಲ್ಲಿ ಮಾತ್ರ ಕಾಣಸಿಗುತ್ತದೆ. ಫಾಲ್ಗುಣ ಮಾಸದಲ್ಲಿ ನಡೆಯುವ ಈ ಹಬ್ಬಕ್ಕೆ ಕೂಡುವಳಿಯವರು ಹತ್ತರಕಟ್ಟೆಯಲ್ಲಿ ರೂಪುರೇಖೆ ಹಾಗೂ ಕುಣಿತದ ಸಿದ್ಧತೆಗಳನ್ನು ಮಾಡಿಕೊಂಡು ದಶಮಿಯಂದು ಹೋಳಿ ಆಚರಣೆ ಆರಂಭಿಸುತ್ತಾರೆ. ಅಂದು ತುಳಸಿಕಟ್ಟೆಯನ್ನು ಹೂವು, ತೋರಣ ಮತ್ತು ದೀಪಗಳಿಂದ ಅಲಂಕರಿಸಿ ದೇವಿಯನ್ನು ಆವಾಹಿಸಿ, ಗುರಿಕಾರರು, ಕೂಡುವಳಿಯ ಹಿರಿಯರು, ಯುವಕರು ಮತ್ತು ಮಕ್ಕಳು ಸೇರಿ ತುಳಸಿಕಟ್ಟೆಗೆ ಐದು ಸುತ್ತು ಬಂದು ತೆಂಗಿನಕಾಯಿಯನ್ನು ವಾದ್ಯದ ನಾದದ ನಡುವೆ ತುಳಸಿಯ ಮೇಲೆ ಏರಿಸುತ್ತಾರೆ.
ಹೋಳಿಯಲ್ಲಿ ಅಲಂಕಾರಿಕವಾಗಿ ವೇಷಧಾರಣೆ ಮಾಡಿ ಕುಣಿಯುವವರನ್ನು ‘ಖೇಲೆ’ ಎಂದು ಕರೆಯಲಾಗುತ್ತಿದ್ದು, ಅವರಿಗೆ ವಿಶೇಷ ವೇಷಭೂಷಣ ಸಂಪ್ರದಾಯವಿದೆ. ಪೈಜಾಮಾ, ನೆರಿಯಂಗಿ, ಶಾಲುಗಳು, ಮುಂಡಾಸು, ಜರಿ ಅಲಂಕಾರ, ಅಬ್ಬಲಿಗೆ ಹಾಗೂ ಸುರಗಿ ಹೂವಿನ ಅಲಂಕಾರ, ಕಾಲಿಗೆ ಗೆಜ್ಜೆ ಮತ್ತು ಕಡ್ಗಗಳನ್ನು ಧರಿಸಿ ಅವರು ಕುಣಿತದಲ್ಲಿ ಪಾಲ್ಗೊಳ್ಳುತ್ತಾರೆ. ಹಿಂದೆ ಒಂದು ತಿಂಗಳ ಕಾಲ ನಡೆಯುತ್ತಿದ್ದ ಈ ಹಬ್ಬ ಈಗ ಐದು ದಿನಗಳಿಗೆ ಸೀಮಿತವಾಗಿದ್ದು, ಈ ಅವಧಿಯಲ್ಲಿ ಕೊಡುವಳಿಗೆ ಸೇರಿದ ಎಲ್ಲಾ ಮನೆಯ ಪುರುಷರು ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಹಬ್ಬದ ಸಮಯದಲ್ಲಿ ಸಂಬಂಧಿಕರ ನಡುವಿನ ಭಿನ್ನಾಭಿಪ್ರಾಯಗಳನ್ನು ಮರೆತು ಪರಸ್ಪರ ಮನೆಗಳಿಗೆ ಭೇಟಿ ನೀಡುವುದು ಸಂಪ್ರದಾಯವಾಗಿದ್ದು, ಐದು ದಿನಗಳ ಕಾಲ ಕೆಲವು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ. ಮಾಂಸಾಹಾರ, ಮದ್ಯಪಾನ, ಬೀಡಿ–ಸಿಗರೇಟ್ ಸೇವನೆ, ಕ್ಷೌರ ಇತ್ಯಾದಿಗಳನ್ನು ತ್ಯಜಿಸಬೇಕು, ಬ್ರಹ್ಮಚರ್ಯವನ್ನು ಪಾಲಿಸತಕ್ಕದ್ದು, ಸೂತಕಾದಿಗಳಿದ್ದಲ್ಲಿ ಹಬ್ಬಕ್ಕೆ ಭಾಗಿಯಾಗುವಂತಿಲ್ಲ, ಬರಿಗಾಲಿನಲ್ಲಿ ಊರು ಸಂಚರಿಸಿ ಮನೆಗಳಿಗೆ ತೆರಳಿದಾಗ ಗೃಹಿಣಿಯರು ಅವರ ಪಾದ ತೊಳೆಯಿಸಿ ಅಕ್ಷತೆ ಅಕ್ಕಿ, ವೀಳ್ಯದೆಲೆ, ಅಡಿಕೆ, ತೆಂಗಿನಕಾಯಿ ಹಾಗೂ ಕಾಣಿಕೆ ನೀಡುತ್ತಾರೆ. ಹೋಳಿ ಸಂಭ್ರಮದಲ್ಲಿ ಗುಮ್ಮಟೆ ನೃತ್ಯ ಪ್ರಮುಖವಾಗಿದ್ದು, ತಾಳ ಜಾಗಟೆಯ ಜೊತೆಗೆ ಖೇಲೆಯವರು ಗುಮ್ಮಟೆ ಬಾರಿಸುತ್ತಾ ಲಯಬದ್ಧವಾಗಿ ಹಾಡು ಹೇಳುತ್ತಾ ಕುಣಿಯುತ್ತಾರೆ. ಮಣ್ಣಿನ ಕಳಸಿಯಿಂದ ತಯಾರಾಗುವ ಗುಮ್ಮಟೆ ವಿಶಿಷ್ಟವಾದ ಚರ್ಮವಾದ್ಯವಾಗಿದ್ದು, ಅದರ ನಾದಕ್ಕೆ ಕುಣಿತ ನಡೆಯುತ್ತದೆ. ಜೊತೆಗೆ ಕೋಲಾಟವೂ ನಡೆಯುತ್ತಿದ್ದು, ಮರಾಠಿ ಹಾಗೂ ಕನ್ನಡ ಭಾಷೆಯ ಹಾಡುಗಳು ಹಾಡುತ್ತಾರೆ.
ಹಬ್ಬದ ವೇಳೆ ಚಿಕ್ಕ ಮಕ್ಕಳನ್ನು ಖೇಲೆಯವರು ಎತ್ತಿ ಕುಣಿಸುವುದು ಅವರ ಭವಿಷ್ಯ ಶುಭವಾಗುತ್ತದೆ ಎಂಬ ನಂಬಿಕೆಯೂ ಇದೆ. ಐದು ದಿನಗಳ ಹಬ್ಬದ ಅವಧಿಯಲ್ಲಿ ಸಸ್ಯಾಹಾರ ಊಟೋಪಚಾರಗಳನ್ನು ಕೂಡುವಳಿಯ ಮನೆಗಳಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. ಹುಣ್ಣಿಮೆಯ ದಿನ ತುಳಸಿಯ ಮೇಲಿಟ್ಟ ತೆಂಗಿನಕಾಯಿಯನ್ನು ಕೆಳಗಿಳಿಸಿ ಜಲದೇವತೆಗೆ ಅರ್ಪಿಸಿ, ನಂತರ ಹೊಲದಲ್ಲಿ ಕಾಮದಹನದ ಸಂಕೇತವಾಗಿ ಅಗ್ನಿಗೆ ಸಮರ್ಪಿಸಿ ಪುರುಷರು ಬೆಂಕಿಯನ್ನು ದಾಟಿ ಹತ್ತರಕಟ್ಟೆಗೆ ಮರಳುತ್ತಾರೆ. ನಂತರ ತುಳಸಿಗೆ ಪೂಜೆ ನೆರವೇರಿಸಿ ಎಲ್ಲರೂ ಪರಸ್ಪರ ಆಶೀರ್ವಾದ ಪಡೆದು ಅನ್ನಪ್ರಸಾದ ಸ್ವೀಕರಿಸುತ್ತಾರೆ.
ಬಳಿಕ ಸಂಗ್ರಹವಾದ ಅಕ್ಕಿ, ತೆಂಗಿನಕಾಯಿ ಮತ್ತು ಹಣವನ್ನು ಲೆಕ್ಕ ಹಾಕಿ ಹತ್ತರಕಟ್ಟೆಯಲ್ಲಿ ನಡೆಯುವ ಗೋದೇಳು ಪೂಜೆ, ಮಾರಿ ಪೂಜೆ ಹಾಗೂ ಇತರ ಧಾರ್ಮಿಕ ಕಾರ್ಯಗಳಿಗೆ ದೇವಸ್ಥಾನದ ಅಭಿವೃದ್ಧಿಗೆ ಬಳಸಲಾಗುತ್ತದೆ. ಹೀಗೆ ಮರಾಠಿ ಸಮುದಾಯದವರು ಒಂದು ವಾರದ ಕಾಲ ವಿಶಿಷ್ಟ ರೀತಿಯಲ್ಲಿ ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ.
ಇಂದಿನ ಬದಲಾಗುತ್ತಿರುವ ಕಾಲಮಾನದಲ್ಲಿ ಹೋಳಿ ಹಬ್ಬದ ಆಚರಣೆಯಲ್ಲೂ ಅನೇಕ ರೀತಿಯ ಬದಲಾವಣೆಗಳು ಗೋಚರಿಸುತ್ತಿವೆ. ಆಚರಣೆಯ ವೇಷಭೂಷಣಗಳಲ್ಲಿ ವೈವಿಧ್ಯತೆ ಕಾಣಿಸಿಕೊಂಡಿದ್ದು, ಈಗ ಯಕ್ಷಗಾನ ಶೈಲಿಯ ವೇಷಭೂಷಣಗಳು ಹಾಗೂ ಕೀರೀಟಗಳನ್ನೂ ಬಳಸುವ ಪದ್ಧತಿ ಹೆಚ್ಚಾಗಿದೆ. ಜೊತೆಗೆ ಹೆಜ್ಜೆ ಹಾಗೂ ಗೆಜ್ಜೆಗಳ ಪ್ರದರ್ಶನದಲ್ಲಿಯೂ ಹೊಸ ರೀತಿಯ ಪ್ರಯೋಗಗಳು ಕಂಡುಬರುತ್ತಿವೆ. ಇಂತಹ ಸಂದರ್ಭದಲ್ಲಿಯೂ ನಮ್ಮ ಪರಂಪರೆಯ ಹೋಳಿ ಆಚರಣೆಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಮಹತ್ತರ ಹೊಣೆಗಾರಿಕೆ ಯುವ ಸಮುದಾಯದ ಮೇಲಿದೆ.




