
ಶಿವಮೊಗ್ಗ: ಶಿವಮೊಗ್ಗದ ಪ್ರವಾಸೋದ್ಯಮವನ್ನು ಉತ್ತೇಜಿಸುವ ಮತ್ತು ಯುವಕರು ಹಾಗೂ ಸಾರ್ವಜನಿಕರಲ್ಲಿ ದೇಶಭಕ್ತಿಯ ಭಾವನೆ ಹೆಚ್ಚಿಸಲು ಕ್ರಮಗಳು ಕೈಗೊಳ್ಳಲಾಗುತ್ತಿದ್ದು, ಈ ಹಿನ್ನೆಲೆ ಸಂಸದ ಬಿ.ವೈ. ರಾಘವೇಂದ್ರ ರಕ್ಷಣಾ ಇಲಾಖೆಗೆ ಸಿಗಂದೂರು ಸೇತುವೆ ಬಳಿ ನೌಕಾಪಡೆಯ ಯುದ್ಧ ನೌಕೆ ಸ್ಥಾಪನೆಗೆ ಮನವಿ ಮಾಡಿದ್ದಾರೆ. ಈ ಹಿಂದೆ ಅಲ್ಲಮಪ್ರಭು ಮೈದಾನದಲ್ಲಿ ಯುದ್ಧ ಟ್ಯಾಂಕ್ನ್ನು ಸ್ಥಾಪಿಸಲಾಗಿದ್ದರೆ, ಈಗ ಕಿರಣ್ ಮಾರ್ಕ್ 1 ಯುದ್ಧ ತರಬೇತಿ ವಿಮಾನವನ್ನು ಕೂಡ ಸ್ಥಾಪಿಸಲು ತರಲಾಗಿದೆ. ಈ ವಿಮಾನವನ್ನು ಹೈದರಾಬಾದ್ನ ಹಕೀಮ್ಪೇಟ್ ಏರ್ಬೇಸ್ನಿಂದ ಶಿವಮೊಗ್ಗಕ್ಕೆ ತರಲಾಗಿದ್ದು, 2023ರಲ್ಲಿ ನಿವೃತ್ತಗೊಂಡ ಈ ವಿಮಾನವನ್ನು ಜಿಲ್ಲೆಯ ಜನತೆಗೆ ಗೌರವಪೂರ್ಣವಾಗಿ ಪ್ರದರ್ಶಿಸಲು ಯೋಜನೆ ಹಾಕಲಾಗಿದೆ. ಸೇನಾ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಸಹಕಾರದಿಂದ ಈ ವಿಮಾನ ಬಂದಿದೆ ಎಂದು ಸಂಸದರು ತಿಳಿಸಿದ್ದು, ವಾಯುಪಡೆ ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ಕೂಡ ನಡೆಸುತ್ತಿದೆ. ನೌಕೆ ಸ್ಥಾಪನೆಯಿಂದ ಸಿಗಂದೂರು ಸೇತುವೆಗೆ ಹೆಚ್ಚಿನ ಪ್ರವಾಸಿಗರ ಆಕರ್ಷಣೆ ಹೆಚ್ಚುವಂತಾಗುತ್ತದೆ ಎಂದು ಅವರು ಭಾವಿಸಿದ್ದಾರೆ.