
ಮೈಸೂರು: ಮೈಸೂರು ನಗರದ ಇವಿ ವಾಹನಗಳ ಬಳಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ, ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಯನ್ನು ಉತ್ತೇಜಿಸಲು ಕರ್ನಾಟಕ ಸಾರಿಗೆ ಇಲಾಖೆ ವಿಶೇಷ ಯೋಜನೆ ರೂಪಿಸಿದ್ದು, ಎಲೆಕ್ಟ್ರಿಕ್ ಬಸ್ಗಳ ಡಿಪೋ ಹಾಗೂ ಹೈಪವರ್ ಚಾರ್ಜಿಂಗ್ ಸ್ಟೇಷನ್ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಇ ಸೇವಾ ಯೋಜನೆಯಡಿಯಲ್ಲಿ ಪ್ರಸ್ತಾವನೆ ಸಲ್ಲಿಸಿದೆ. ಪ್ರಸ್ತುತ ಮೈಸೂರು-ಬೆಂಗಳೂರು ಮಾರ್ಗದಲ್ಲಿ ಮಾತ್ರ ಇವಿ ಬಸ್ಗಳು ಸಂಚರಿಸುತ್ತಿದ್ದರೂ, ಭವಿಷ್ಯದಲ್ಲಿ ಹೆಚ್ಚಿನ ಬಸ್ ಸೇವೆ ಹಾಗೂ ಸುಧಾರಿತ ಚಾರ್ಜಿಂಗ್ ವ್ಯವಸ್ಥೆ ಒದಗಿಸಲು ಬನ್ನಿಮಂಟಪದಲ್ಲಿ 4.5 ಎಕರೆ ಭೂಮಿ ಗುರುತಿಸಲಾಗಿದೆ. ಈ ಡಿಪೋದಲ್ಲಿ ಚಾರ್ಜಿಂಗ್ ಸ್ಟೇಷನ್ಗಳ ಜೊತೆಗೆ ಬಸ್ ನಿಲುಗಡೆ ಸ್ಥಳ, ನಿರ್ವಹಣಾ ಕೊಠಡಿಗಳು, ವಾಹನ ನಿರ್ವಾಹಕರಿಗೆ ಕ್ಯಾಶ್ ಲೆಕ್ಕವಿಡುವ ವ್ಯವಸ್ಥೆ, ರೆಸ್ಟ್ ರೂಂ ಹೀಗೆ ವಿವಿಧ ಸೌಲಭ್ಯಗಳು ಲಭ್ಯವಿರಲಿವೆ. ಅಲ್ಲದೆ, ತುರ್ತು ಸಂದರ್ಭಕ್ಕೆ ನಗರ ಬಸ್ ನಿಲ್ದಾಣದ ಬಳಿ ಮೂರೂ ಕಡೆ ಚಾರ್ಜಿಂಗ್ ಸೌಲಭ್ಯ ಸ್ಥಾಪಿಸುವ ಪ್ರಸ್ತಾವನೆಯೂ ಇದ್ದು, ಇದರಿಂದ ಪೆಟ್ರೋಲ್ ಮತ್ತು ಡಿಸೇಲ್ ವಾಹನಗಳ ಅವಲಂಬನೆ ಕಡಿಮೆಯಾಗುವ ಜೊತೆಗೆ ಮಾಲಿನ್ಯರಹಿತ, ಹೆಚ್ಚು ಲಭ್ಯವಿರುವ ಮತ್ತು ಸ್ಥಿರ ವಾಹನ ಸೇವೆ ಮೈಸೂರು ನಗರಕ್ಕೆ ಲಭಿಸಲಿದೆ ಎಂದು ಕೆಎಸ್ಆರ್ಟಿಸಿ ನಗರ ವಿಭಾಗೀಯ ನಿಯಂತ್ರಣಾಧಿಕಾರಿ ಎಚ್.ಟಿ. ವೀರೇಶ್ ತಿಳಿಸಿದ್ದಾರೆ.