
ಕೊಪ್ಪ: ಮಲೆನಾಡಿನಲ್ಲಿ ಕಾಡುಪ್ರಾಣಿಗಳ ಹಾವಳಿ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಮೊನ್ನೆಯಷ್ಟೇ ಶೃಂಗೇರಿ ತಾಲ್ಲೂಕಿನ ಕಿಗ್ಗಾದ ಮಾಗಲು ನಿವಾಸಿ ಜಯರಾಮ್ ಎಂಬುವವರ ಮೇಲೆ ಹಂದಿ ದಾಳಿ ನಡೆಸಿದ್ದು ಪರಿಣಾಮ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಜೊತೆಗೆ ಕಾಡಾನೆ, ಕಾಡುಕೋಣಗಳು ಮಲೆನಾಡಿನಾದ್ಯಂತ ದಾಳಿ ನಡೆಸಿ ಬೆಳೆಗಳ ನಾಶ ಮಾಡಿದ್ದಲ್ಲದೇ, ಅದೆಷ್ಟೋ ಜನರ ಜೀವಗಳನ್ನು ಬಲಿ ತೆಗೆದುಕೊಂಡಿವೆ. ಇಷ್ಟಾದರೂ ಕೂಡ ಜನಪ್ರತಿನಿಧಿಗಳಾಗಲೀ ಅಥವಾ ಸರ್ಕಾರವಾಗಲಿ ಇದನ್ನು ಇನ್ನೂ ಗಂಭೀರವಾಗಿ ತೆಗೆದುಕೊಳ್ಳದೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಇಂದು ಮತ್ತೊಂದು ಜೀವ ಕಾಡಾನೆ ದಾಳಿಗೆ ಬಲಿಯಾಗಿದೆ.
ಹೌದು ಸ್ವಲ್ಪ ದಿನದ ಹಿಂದೆ ಕುದುರೆಗುಂಡಿಯ ಸೀತೂರಿನ ಕೃಷ್ಣೆಗೌಡ್ರು ಎಂಬುವರ ತೋಟಕ್ಕೆ ಆನೆಗಳು ನುಗ್ಗಿ ಸುಮಾರು 50 ಕ್ಕೂ ಹೆಚ್ಚು ಅಡಿಕೆ ಮರಗಳನ್ನ ನಾಶ ಮಾಡಿದ್ದವು. ಇದನ್ನ ಅರಣ್ಯ ಇಲಾಖೆಯವರ ಗಮನಕ್ಕೆ ತರಲಾಗಿತ್ತು. ಆದರೆ ಅರಣ್ಯ ಇಲಾಖೆಯವರು ಖುದ್ದು ಬರದೇ ಗ್ರಾಮಸ್ಥರಿಗೆ ಪಟಾಕಿ ಕೊಟ್ಟು ಆನೆಯನ್ನು ಓಡಿಸಲು ಹೇಳಿದ್ದಾರೆ. ಸ್ಥಳೀಯರು ಸೇರಿ ಆನೆ ಓಡಿಸುವಾಗ ಉಮೇಶ ಎಂಬ ವ್ಯಕ್ತಿಯನ್ನು ಕಾಡಾನೆ ತುಳಿದು ಸಾಯಿಸಿದೆ. ಇದಕ್ಕೆ ಕಾರಣ ಯಾರು? ಮುಂದೆ ಇಂಥಹ ಘಟನೆಗಳು ಮರುಕಳಿಸುತ್ತಕಲೇ ಇರುತ್ತದೆ. ಇದನ್ನು ತಡೆಯುವವರು ಯಾರು? ಇದಕ್ಕೆ ಮುಂದಿನ ಪರಿಹಾರವೇನು? ಹೌದು ಜನ ಪ್ರತಿಭಟಿಸಿದರೆ ಸರ್ಕಾರವೇನೋ ದುಡ್ಡು ಕೊಟ್ಟು ಪರಿಹಾರ ನೀಡಿದ್ದೇವೆ ಎನ್ನುತ್ತದೆ. ಆದರೆ ಹೋದ ಜೀವ ಬರಬಲ್ಲದೆ? ಇಲ್ಲ. ಇಂಥಹ ಘಟನೆಗಳು ನಡೆಯದಂತೆ ಸೂಕ್ತವಾದ ಪರಿಹಾರ ಕಂಡಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಸರ್ಕಾರ ಜನಪ್ರತಿನಿಧಿಗಳೇ ಈಗಲಾದರೂ ನಿದ್ದೆಯಿಂದ ಎಚ್ಚೆತ್ತುಕೊಳ್ಳಿ ಎಂಬುದಷ್ಟೇ ನಮ್ಮ ಕಳಕಳಿ.