
ಬೆಂಗಳೂರು: ಶಕ್ತಿಸೌಧವೆಂದೇ ಹೆಸರಾದ ವಿಧಾನಸೌಧದಲ್ಲೇ ಕಳ್ಳತನ ನಡೆದಿರುವುದು ರಾಜ್ಯಾದ್ಯಂತ ಆತಂಕ ಹಾಗೂ ಸಂಚಲನಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಸರ್ಕಾರದ ಪ್ರಭಾವಿ ಸಚಿವ ಭೈರತಿ ಸುರೇಶ್ ಅವರ ಕಚೇರಿಯಲ್ಲಿ ಇದ್ದ ಸುಮಾರು 300 ಗ್ರಾಂ ಚಿನ್ನಾಭರಣ ಮತ್ತು 1.5 ಲಕ್ಷ ರೂಪಾಯಿ ನಗದು ಹೊಂದಿದ್ದ ಕೈಚೀಲ ಕಳ್ಳತನವಾಗಿದ್ದು, ಈ ಘಟನೆ ವಿಧಾನಸೌಧದ ಭದ್ರತಾ ವ್ಯವಸ್ಥೆಯ ಮೇಲೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ಕೆಲಸದ ನಿಮಿತ್ತ ಸಚಿವರ ಕಚೇರಿಗೆ ಬಂದ ನವೀನ್ ಎಂಬವರು ಕೈಚೀಲವನ್ನು ಅಲ್ಲೇ ಮರೆತು ಹೋಗಿದ್ದು, ಮಾರನೆಯ ದಿನ ಮರಳಿ ಬಂದಾಗ ಅದು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಸಿಸಿಟಿವಿ ದೃಶ್ಯಾವಳಿ ಪರಿಶೀಲನೆಯ ವೇಳೆ ಡಿಪಿಎಆರ್ ಇಲಾಖೆಯ ಡಿ ಗ್ರೂಪ್ ನೌಕರನೊಬ್ಬ ಕೈಚೀಲವನ್ನು ತೆಗೆದುಕೊಂಡು ಹೋಗಿರುವುದು ಪತ್ತೆಯಾಗಿದೆ. ಪೊಲೀಸರು ಆತನನ್ನು ಬಂಧಿಸಿ ತನಿಖೆ ಮುಂದುವರಿಸಿದ್ದು, ಮೆಟಲ್ ಡಿಟೆಕ್ಟರ್ ಮತ್ತು ಬ್ಯಾಗ್ ಪರಿಶೀಲನೆ ವ್ಯವಸ್ಥೆಯಿದ್ದರೂ ಲಕ್ಷಾಂತರ ನಗದು ಮತ್ತು ನೂರಾರು ಗ್ರಾಂ ಚಿನ್ನ ವಿಧಾನಸೌಧದ ಒಳಗೆ ಹೇಗೆ ಬಂದವು ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ. ವಿಧಾನಸೌಧದಂತಹ ಉನ್ನತ ಭದ್ರತಾ ಪ್ರದೇಶದಲ್ಲೇ ಈ ರೀತಿಯ ಘಟನೆ ನಡೆದಿರುವುದು ಭದ್ರತಾ ಲೋಪವನ್ನು ಸ್ಪಷ್ಟಪಡಿಸುತ್ತಿದ್ದು, ಮುಂದಿನ ದಿನಗಳಲ್ಲಿ ಸಚಿವಾಲಯಗಳ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಬೇಕೆಂಬ ಒತ್ತಾಯ ಹೆಚ್ಚಾಗಿದೆ.





