
ಚಿಕ್ಕಮಗಳೂರು: ನಗರದ ಹೊರವಲಯದ ಲಕ್ಯಾ ಕ್ರಾಸ್ ಬಳಿ ಅದೃಷ್ಟ ಮತ್ತು ಪವಾಡವನ್ನು ಎನಿಸುವಂತಹ ಭೀಕರ ಅಪಘಾತ ಸಂಭವಿಸಿದೆ. ಚಲಿಸುತ್ತಿದ್ದ ಕಾರಿನ ಮೇಲೆ ಕಟ್ಟಿಗೆ ತುಂಬಿಕೊಂಡಿದ್ದ ಲಾರಿ ಉರುಳಿ ಬಿದ್ದ ಪರಿಣಾಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ಹಾಗೂ ಒಂದು ಮಗು ಕೆಲಕಾಲ ವಾಹನದೊಳಗೆ ಸಿಲುಕಿಕೊಂಡಿದ್ದರು. ಸ್ಥಳೀಯರ ತಕ್ಷಣದ ಸಹಾಯದಿಂದ ಮೂವರನ್ನೂ ಸುರಕ್ಷಿತವಾಗಿ ಹೊರತೆಗೆದು ಪ್ರಾಣಾಪಾಯದಿಂದ ಪಾರು ಮಾಡಲಾಗಿದೆ. ಈ ಘಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿ ವಾಹನಗಳು ಸಾಲಾಗಿ ನಿಂತಿದ್ದವು. ಲಾರಿ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣವಾಗಿರಬಹುದೆಂದು ಶಂಕಿಸಲಾಗಿದೆ. ಮಾಹಿತಿ ತಿಳಿದ ಗ್ರಾಮಾಂತರ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.




