
ರಾಘು ನೀನು ಅಲ್ಲಿ, ಇಲ್ಲಿ ಒಡಾಡ್ತ ಇರ್ತಿಯಾ ನಿನಗೆ ಎಲ್ಲಾದ್ರೂ ಕುಡಿತ ಬಿಡಿಸೊ ಆಸ್ಪತ್ರೆಗಳು ಗೊತ್ತಿದಿಯಾ? ಹಾಗಂತ ಮಧ್ಯ ವಯಸ್ಸಿನ ಹೆಂಗಸೊಬ್ಬರು ಕೇಳಿದ್ರು. ಅವರಿಗೆ ಅವರ ಗಂಡನದೇ ಸಮಸ್ಯೆಯಾಗಿತ್ತು. ಆತ ಮುಂಜಾನೆ ಕಾಫಿಯಾಗಿ ವಿಸ್ಕಿಯನ್ನೆ ಕುಡಿಯುತ್ತಿದ್ದ. ಕುಡಿದು ಬಂದು ಯಾರೆಂದರೆ ಅವರನ್ನ ಮನಬಂದಂತೆ ಬೈಯುತ್ತಿದ್ದ . ಅವರು ಬೆಂಗಳೂರಿನ ಬಡಾವಣೆಯೊಂದರಲ್ಲಿ ವಾಸಿಸುತ್ತಿರುವ ಆತನಿಗೆ ಏನೂ ಕೆಲಸವಿಲ್ಲ. ಆಗಾಗ ರಿಯಲ್ ಎಸ್ಟೇಟ್ ಮಾಡುವವರ ಜೊತೆ ಓಡಾಡಿ ನೂರೋ, ಇನ್ನೂರೋ ಪಡೆದರೆ ಅವನ ಸಂಪಾದನೆ ಮುಗಿಯುತ್ತಿತ್ತು. ಈಕೆ ಗಾರ್ಮೆಂಟ್ಸ್ ಒಂದರಲ್ಲಿ ಉದ್ಯೋಗದಲ್ಲಿದ್ದಾರೆ. ಆಕೆಯ ಸಂಬಳದಲ್ಲಿಯೇ ಒಂಬತ್ತನೆ ತರಗತಿ ಓದುತ್ತಿರುವ ಮಗಳ ವಿದ್ಯಾಭ್ಯಾಸ, ಸಂಸಾರದ ಖರ್ಚು, ಮನೆ ಬಾಡಿಗೆ ಎಲ್ಲವೂ ನಡೆಯಬೇಕು. ಬೆಂಗಳೂರಿನ ಬದುಕು ತುಂಬಾ ದುಸ್ತರ. ಹೀಗಿರುವಾಗ ಈತ ಇದ್ದವರನ್ನೆಲ್ಲ ಬಾಯಿಗೆ ಬಂದಂತೆ ಬೈಯುತ್ತಿದ್ದರೆ ಎಷ್ಟು ದಿನಾಂತ ಕೇಳ್ತಾರೆ. ಮನೆ ಖಾಲಿ ಮಾಡಿ ಅಂತ ಹೇಳಿ ಬಿಡ್ತಾರೆ. ಹೀಗೆ ಮನೆಯಿಂದ ಮನೆಗೆ ಬದಲಾಯಿಸ್ತ ಹುಡುಗಿ ಶಾಲೆ, ನನ್ನ ಗಾರ್ಮೆಂಟ್ಸ್ನ ಅಂತರ ಹೆಚ್ಚಾಗ್ತಿದೆ ಕಣಪ್ಪ ಅಂತ ಕೊರಗುತ್ತಾರೆ. ಈತ ಕುಡಿಯದಿದ್ದಾಗ (ಅಪರೂಪಕ್ಕೆ) ಮನೆಗೆ ಹೋದ್ರೆ ಆ ತಾಯಿ ಹೇಳುವುದನ್ನು ಯಾವುದೇ ಕಾರಣಕ್ಕೂ ನಂಬೋಕೆ ಸಾಧ್ಯವಿಲ್ಲ. ಅಂತಹ ವಿನಯವಂತಿಕೆ, ಹೃದಯ ಶ್ರೀಮಂತಿಕೆಯನ್ನು ಪ್ರದರ್ಶಿಸುತ್ತಾನೆ. ಅಪ್ಪಿ ತಪ್ಪಿ ಕುಡಿದಾಗ ಏನಾದ್ರು ಕೈಗೆ ಸಿಕ್ಕರೆ ಮುಗೀತು ಕಥೆ. ನೋಡಪ್ಪ ರಾಘು, ನೀ ಛಲೋ ಬರೀತಿ. ರೊಕ್ಕ ಮಾಡ್ಕೊ ಈ ಸೊಸೈಟಿಯಾಗ ರೊಕ್ಕ ಬಾಳ ಮುಖ್ಯ ಅದ ನೋಡು. ನಿನ್ ಸ್ಟೇಟಸ್ಗೆ ಛಲೋ ಬಾಳಬೇಕು. ನಾನ್ ನೋಡು ದಿವಾನ ಆದಿನೆಲೆ ಯಾರ್ಗೂ ತಲೆ ಬಾಗಂಗಿಲ್ಲ……! ಅಂತ ಹೇಳಿ 20 ರೂಪಾಯಿ ರೊಕ್ಕ ಇಸ್ಕೊಂಡು ಹೋಗೊದು ಗ್ಯಾರಂಟಿ. ಹಾಗೆ ನಾನು 20 ರೂಪಾಯಿ ಕೊಟ್ಟ ದಿನ ಅವರ ಮನೆಯತ್ತ ಸುಳಿಯುವುದೇ ಇಲ್ಲ. ಆ ಆಂಟಿ ನಂಗೆ ಸಹಸ್ರನಾಮ ಮಾಡುತ್ತಾರೆ. ಈ ಪುಣ್ಯಾತ್ಮ ಪ್ರಾಮಾಣಿಕ, ನಾನು ದುಡ್ಡು ಕೊಟ್ಟ ವಿಷಯವನ್ನು ಹೇಳಿ ಬಿಡುತ್ತಾನೆ. ಒಮ್ಮೊಮ್ಮೆ ಅವರ ಜಗಳಗಳು ವಿಪರೀತಕ್ಕೆ ಹೋಗಿ ಬಿಡುತ್ತಿತ್ತು. ಕೈಗೆ ಸಿಕ್ಕಿದ್ದರಲ್ಲಿ ಬಾರಿಸುತ್ತಾನೆ. ಆಕೆ ನೀ ಸತ್ತಾದ್ರು ಹೋಗಬಾರದ ಅಂತ ಶಾಪ ಹಾಕುತ್ತಾಳೆ. ಸ್ನೇಹಿತರೇ ಹಾಗೆ ಶಾಪ ಹಾಕಿದ ಹೆಣ್ಣು ಒಂದು ರಾತ್ರಿ ನಂಗೆ ಕರೆ ಮಾಡಿ ರಾಘು ನಮ್ಮೆಜಮಾನ ಮುಂಜಾನಿ ಮನೆ ಬಿಟ್ಟಾವ ಮಧ್ಯಾಹ್ನ ಊಟಕ್ಕೂ ಬಂದಿಲ್ಲ ಅಡುಗಿ ಮಾಡಿದ್ದು ಹಾಂಗಾ ಅದ. ನೀ ಏನಾರ ನೋಡ್ದೇನಪ್ಪ, ನಾ ಎಲ್ಲಾ ಕಡೆ ನೋಡೀನಿ. ನೀ ಸ್ವಲ್ಪ ಲಕ್ಷ್ಮಿ ಬಾರ್ ಒಳ್ಗ ಕುಂತಾನೇನೊ ನೋಡು ಯಾಕೋ ದಿಗಿಲ್ ಆಕ್ತದ… ಅಂತ ಕಣ್ಣೀರಿಡುತ್ತಾಳೆ. ಇದೇ ಅಲ್ವಾ ಹೆಂಗರುಳು. ನೀ ಸತ್ತೇ ಹೋಗು ಎಂದು ಶಾಪವಿಟ್ಟಾಕೆ ತನ್ನ ಗಂಡ ಮದ್ಯಾಹ್ನ ಊಟಕ್ಕೆ ಬಂದಿಲ್ಲ ಅಂತ ಕಣ್ಣೀರಿಡುತ್ತಾಳೆ. ಪ್ರೀತಿಯೆಂದರೆ ಇದೇನಾ? ಕೇವಲ ಹೆಣ್ಣಿಗೆ ಮಾತ್ರ ಇಂತಹ ಸಹನೆ, ಮಮಕಾರ ಇರೋಕೆ ಹೇಗೆ ಸಾಧ್ಯ ಅಂತ ಆಶ್ಚರ್ಯವಾಗುತ್ತೆ. ಇರ್ಲಿ ಬಿಡಿ. ಆಕೆ ತನ್ನ ಗಂಡನ ಬಗ್ಗೆ ಚಿಂತೆ ಮಾಡುತ್ತಿದ್ದರೆ ಅವನು ಅದ್ಯಾರೋ ರಿಯಲ್ ಎಸ್ಟೇಟ್ ಜನರ ಜೊತೆ 200 ಸಂಪಾದನೆ ಮಾಡ್ಕೊಂಡು ತಿಂದು ಕುಡಿದು ಮಜಾ ಮಾಡುತ್ತಿರುತ್ತಾನೆ.
ಬದುಕು ಏಷ್ಟು ವಿಚಿತ್ರ ಅಲ್ವಾ ಬಲಹೀನ ಗಂಡಸು ಹೆಂಡತಿಯ ಮುಂದೆ ಮಹಾ ಪರಾಕ್ರಮಿ! ಅವನ ಪೌರುಷಕ್ಕೆ ಬಲಿಯಾಗುವುದು ಎಂದೆಂದಿಗು ಹೆಣ್ಣೇ.. ಅಂತಹ ದುರುಳ ಗಂಡಿನ ಜೊತೆ ನಗು ನಗುತ್ತಾ ಬಾಳುವ ತಾಳ್ಮೆ ಹೆಣ್ಣಿಗಿದೆ ಇದಕ್ಕಾಗಿ ಸೃಷ್ಠಿಕರ್ತನಿಗೆ ನಾವು ಋಣಿ.




