
ಮೈಸೂರು: ದಸರಾ ಮಹೋತ್ಸವದ ಅಂಗವಾಗಿ, ನಾಗರಹೊಳೆ ವೀರನಹೊಸಳ್ಳಿಯಿಂದ ಆಗಮಿಸಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆಗೆ ಅರಣ್ಯ ಇಲಾಖೆ ವಿಶೇಷ ಪೌಷ್ಟಿಕ ಆಹಾರದ ಮೆನು ಸಿದ್ಧಪಡಿಸಿದೆ. ಕಾಡಂಚಿನ ಶಿಬಿರಗಳಿಂದ ಬಂದಿರುವ ಈ ಆನೆಗಳಿಗೆ ಸದೃಢತೆ ನೀಡುವ ಉದ್ದೇಶದಿಂದ ಹಸಿರು ಹುಲ್ಲು, ಕುಸುಬಲಕ್ಕಿ, ಉದ್ದಿನಕಾಳು, ಈರುಳ್ಳಿ, ಗೋಧಿ, ಅವಲಕ್ಕಿ, ತರಕಾರಿ ಮಿಶ್ರಣ, ಭತ್ತ, ತೆಂಗಿನಕಾಯಿ, ಬೆಲ್ಲ, ಬೆಣ್ಣೆ ಸೇರಿದಂತೆ ಅನೇಕ ಬಗೆಯ ಆಹಾರವನ್ನು ಬೆಳಗ್ಗೆ ಮತ್ತು ಸಂಜೆ ನೀಡಲಾಗುತ್ತದೆ. ಈ ವರ್ಷದ ದಸರದಲ್ಲಿ ಗಜಪಡೆಗೆ 340 ಟನ್ ಬ್ರಾಂಚ್ ಪೌಡರ್, 170 ಟನ್ ಹಸಿರು ಹುಲ್ಲು, 52 ಟನ್ ಭತ್ತದ ಹುಲ್ಲು, 25 ಟನ್ ಕಬ್ಬು, 225 ಕ್ವಿಂಟಾಲ್ ಭತ್ತ, 75 ಕ್ವಿಂಟಾಲ್ ಅಕ್ಕಿ, 525 ಕೆಜಿ ಬೆಲ್ಲ, ವಿವಿಧ ಕಾಳುಗಳು, ಎಣ್ಣೆಗಳು ಮತ್ತು ಇತರ ಆಹಾರ ವಸ್ತುಗಳನ್ನು ಒದಗಿಸಲು ಯೋಜಿಸಲಾಗಿದೆ. ಆಗಸ್ಟ್ 10ರಂದು ಸಂಜೆ 6.45ರಿಂದ 7.20ರ ಶುಭ ಮಕರ ಗೋಧೂಳಿ ಲಗ್ನದಲ್ಲಿ ಅರಮನೆ ಜಯಮಾರ್ತಾಂಡ ದ್ವಾರದಲ್ಲಿ ಗಜಪಡೆಯನ್ನು ವಿದ್ಯುತ್ ದೀಪಾಲಂಕಾರದಲ್ಲಿ ಸ್ವಾಗತಿಸಲಾಗುವುದು, ಇದು ಮೊದಲ ಬಾರಿಗೆ ಸಂಜೆ ವೇಳೆಯಲ್ಲಿ ನಡೆಯಲಿರುವ ವಿಶೇಷ ಸ್ವಾಗತವಾಗಿದ್ದು, ಪ್ರವಾಸಿಗರು ಇದನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ಚಾಲನೆ ನೀಡಲಿದ್ದು, ಶಾಸಕ ಟಿ.ಎಸ್. ಶ್ರೀವತ್ಸ ಅಧ್ಯಕ್ಷತೆ ವಹಿಸಲಿದ್ದಾರೆ ಹಾಗೂ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.