
ಚಿಕ್ಕಮಗಳೂರು: ಮಡಿಕೇರಿ ಘಟನೆಯ ಬೆನ್ನಲ್ಲೇ ಕಾಫಿನಾಡಲ್ಲೂ ಪ್ರವಾಸಿಗರ ವಲಯದಲ್ಲಿ ಆತಂಕ ಮೂಡಿಸಿರುವ ನಿಗೂಢ ನಾಪತ್ತೆ ಪ್ರಕರಣ ಬೆಳಕಿಗೆ ಬಂದಿದೆ. ಕೇರಳದ ಪಾಲಕ್ಕಾಡ್ ಮೂಲದ 10ನೇ ತರಗತಿ ವಿದ್ಯಾರ್ಥಿನಿ ನಂದನ (ಶ್ರೀನಂದನ) ಎಂಬ ಬಾಲಕಿ ಚಿಕ್ಕಮಗಳೂರು ತಾಲೂಕಿನ ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಮಿಸ್ಸಿಂಗ್ ಆಗಿದ್ದಾಳೆ. ಪ್ರವಾಸಕ್ಕೆಂದು ಕೇರಳದಿಂದ ಬಂದಿದ್ದ 40 ಜನರ ತಂಡದೊಂದಿಗೆ ಕುಟುಂಬ ಸದಸ್ಯರ ಜೊತೆ ಆಗಮಿಸಿದ್ದ ನಂದನ, ಪರ್ವತದ ಸುಂದರ ತಾಣ ವೀಕ್ಷಿಸುವ ವೇಳೆ ತಂಡದಿಂದ ಬೇರ್ಪಟ್ಟಿದ್ದು ನಂತರ ಕಾಣೆಯಾಗಿದ್ದಾಳೆ. ಘಟನೆ ತಿಳಿದ ತಕ್ಷಣ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿಗಳು ಹಾಗೂ ಸ್ಥಳೀಯರು ಸೇರಿ ದಟ್ಟ ಅರಣ್ಯ ಹಾಗೂ ಕಡಿದಾದ ಬೆಟ್ಟ-ಗುಡ್ಡಗಳಲ್ಲಿ ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿದರು. ಮಂಜು ಮತ್ತು ಕತ್ತಲಿನ ವಾತಾವರಣದಿಂದ ಕಾರ್ಯಾಚರಣೆಗೆ ಅಡ್ಡಿಯಾಗಿದ್ದು, ಮಧ್ಯರಾತ್ರಿ ಒಂದು ಗಂಟೆಯವರೆಗೆ 30ಕ್ಕೂ ಹೆಚ್ಚು ಸಿಬ್ಬಂದಿಗಳು ಶೋಧ ನಡೆಸಿದರೂ ಬಾಲಕಿಯ ಸುಳಿವು ಸಿಗಲಿಲ್ಲ. ಬಳಿಕ ಕತ್ತಲು ಹೆಚ್ಚಾದ ಕಾರಣ ಸಿಬ್ಬಂದಿಗಳು ಹಿಂತಿರುಗಿದ್ದು, ಇಂದು ಬೆಳಗ್ಗಿನಿಂದಲೇ ಮತ್ತೆ ಪೊಲೀಸ್, ಅರಣ್ಯ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಶೋಧ ಕಾರ್ಯ ಮುಂದುವರಿಸಿದ್ದಾರೆ. ಡ್ರೋನ್ ಮೂಲಕವೂ ಬಾಲಕಿಯ ಪತ್ತೆಗೆ ಅರಣ್ಯ ಇಲಾಖೆ ಮುಂದಾಗಿದೆ. ಘಟನೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದು, ಸ್ಥಳಕ್ಕೆ ಎಸ್ಪಿ ಜಯಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಂದ್ರದ್ರೋಣ ಪರ್ವತಗಳ ಸಾಲಿನಲ್ಲಿ ನಡೆದ ಈ ನಾಪತ್ತೆ ಪ್ರಕರಣ ಪ್ರವಾಸಿಗರ ವಲಯದಲ್ಲಿ ಭಾರೀ ಆತಂಕಕ್ಕೆ ಕಾರಣವಾಗಿದೆ.



