
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ತಮ್ಮ ಸಿಎಂ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿರುವುದಾಗಿ ಘೋಷಿಸಿದ್ದಾರೆ. ರಾಜಭವನದಲ್ಲಿ ರಾಜೀನಾಮೆ ಪತ್ರ ಸಲ್ಲಿಸಿದ ಬಳಿಕ ಗೃಹಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ನಾನು ಮೊದಲಿನಿಂದಲೂ ಹೈಕಮಾಂಡ್ ಏನು ಹೇಳುತ್ತದೋ ಅದಕ್ಕೆ ಬದ್ಧನಾಗಿರುತ್ತೇನೆ ಎಂದು ಹೇಳಿದ್ದೆ. ಅದರಂತೆ ಮೊನ್ನೆ ರಾಜೀನಾಮೆ ನೀಡುವಂತೆ ಸೂಚನೆ ಬಂದಿತ್ತು. ಅದಕ್ಕಾಗಿ ಇಂದು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ” ಎಂದು ಸ್ಪಷ್ಟಪಡಿಸಿದರು. ರಾಜ್ಯಪಾಲರು ನಗರದಲ್ಲಿಲ್ಲದ ಕಾರಣ ಅವರ ಕಚೇರಿಯ ಮುಖ್ಯ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಹಸ್ತಾಂತರಿಸಿರುವುದಾಗಿ ತಿಳಿಸಿದ ಸಿದ್ದರಾಮಯ್ಯ, “ರಾಜ್ಯಪಾಲರು ಇಂದು ರಾತ್ರಿ ಬೆಂಗಳೂರಿಗೆ ವಾಪಸ್ ಬರಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ” ಎಂದರು. ದೀರ್ಘಾವಧಿ ಮುಖ್ಯಮಂತ್ರಿ ಆಗಿ ಸೇವೆ ಸಲ್ಲಿಸಿದ್ದ ತಮ್ಮ ಅಧಿಕಾರ ಅವಧಿಗೆ ಅಧಿಕೃತ ಅಂತ್ಯವಾಯಿತೆಂಬುದನ್ನೂ ಅವರು ಪರೋಕ್ಷವಾಗಿ ಒಪ್ಪಿಕೊಂಡರು. ಇದೇ ವೇಳೆ ಹೈಕಮಾಂಡ್ ಸೂಚನೆಗೆ ತಲೆಬಾಗಿರುವುದನ್ನು ಮುಕ್ತವಾಗಿ ಒಪ್ಪಿಕೊಂಡ ಅವರು, “ಹೇಳಿದಂತೆಯೇ ಕೇಳಿದ್ದೇನೆ” ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕತ್ವದ ಆದೇಶ ಪಾಲಿಸಿದ್ದಾಗಿ ಹೇಳಿದರು.




