
ಚಿಕ್ಕಮಗಳೂರು: ಜಿಲ್ಲೆಯ ದೇವನಗುಲ್ ಅರಣ್ಯ ಪ್ರದೇಶದಲ್ಲಿ ಸುಮಾರು 65 ರಿಂದ 70 ವರ್ಷ ವಯಸ್ಸಿನ ಅಪರಿಚಿತ ವೃದ್ಧನ ಶವ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದ್ದು, ಕಳೆದ ಕೆಲವು ದಿನಗಳಿಂದ ಆ ವ್ಯಕ್ತಿ ರಸ್ತೆ ಬದಿಯ ಅಂಗಡಿಗಳ ಸುತ್ತಮುತ್ತ ತಿರುಗಾಡುತ್ತಿದ್ದು ಯಾರೊಂದಿಗೂ ಸರಿಯಾಗಿ ಮಾತನಾಡುತ್ತಿರಲಿಲ್ಲ ಎನ್ನಲಾಗಿದೆ. ಊರಿನ ಬಗ್ಗೆ ಕೇಳಿದಾಗ “ಮಂಡ್ಯ” ಎಂದು ಹೇಳುತ್ತಿದ್ದನೆಂದು ಸ್ಥಳೀಯರು ಮಾಹಿತಿ ನೀಡಿದ್ದು, ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ ಕಾರಣ ಯಾರೂ ಹೆಚ್ಚಿನ ಗಮನ ಹರಿಸಿರಲಿಲ್ಲ ಎಂದು ತಿಳಿದುಬಂದಿದೆ. ಗ್ರಾಮ ಪಂಚಾಯಿತಿ ತ್ಯಾಜ್ಯ ವಿಲೇವಾರಿ ಪ್ರದೇಶದ ಬಳಿ ನಡೆಯುತ್ತಿದ್ದ ಬೇಲಿ ಕಾಮಗಾರಿಯ ವೇಳೆ ಕಾರ್ಮಿಕರು ಅರಣ್ಯದೊಳಗೆ ಶವವನ್ನು ಕಂಡು ತಕ್ಷಣ ಬಣಕಲ್ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಪಿಎಸ್ಐ ದಿಲೀಪ್ ಕುಮಾರ್ ಮೃತದೇಹವನ್ನು ಪರಿಶೀಲಿಸಿದ್ದು, ದೇಹದ ಮೇಲೆ ಯಾವುದೇ ಗಾಯ ಅಥವಾ ಅನುಮಾನಾಸ್ಪದ ಗುರುತುಗಳು ಕಾಣಿಸಿಲ್ಲ ಎಂದು ತಿಳಿಸಿದ್ದಾರೆ. ಬಳಿಕ ಸಮಾಜಸೇವಕ ಆರಿಫ್ ಅವರ ಆಂಬುಲೆನ್ಸ್ ಮೂಲಕ ಶವವನ್ನು ಚಿಕ್ಕಮಗಳೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆಯೊಂದಿಗೆ ಮೃತನ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತನ ಕುಟುಂಬದವರ ಮಾಹಿತಿ ಸಂಗ್ರಹಿಸುವ ಜೊತೆಗೆ ಸಾವಿನ ನಿಖರ ಕಾರಣ ತಿಳಿದುಕೊಳ್ಳಲು ತನಿಖೆ ಮುಂದುವರಿಸಿದ್ದಾರೆ.





