
ಬೆಳ್ತಂಗಡಿ: ಸಾರ್ವಜನಿಕರ ಆಸ್ತಿಪಾಸ್ತಿ ರಕ್ಷಣೆ ಮಾಡುವ ಪೊಲೀಸ್ ಇಲಾಖೆಯ ಸಿಬ್ಬಂದಿಯೊಬ್ಬರ ಮನೆಯಲ್ಲೇ ಭರ್ಜರಿ ಕಳ್ಳತನ ನಡೆದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪದ್ಮುಂಜದಲ್ಲಿ ಬೆಳಕಿಗೆ ಬಂದಿದೆ. ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಕೃತ್ಯದಲ್ಲಿ ಖದೀಮರು ಸುಮಾರು 13 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಹಾಗೂ ಮನೆಯಲ್ಲಿದ್ದ 1 ಲಕ್ಷ ರೂಪಾಯಿ ನಗದನ್ನು ದೋಚಿ ಪರಾರಿಯಾಗಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣೆಯ ಸಿಬ್ಬಂದಿಯಾಗಿರುವ ಕರುಣಾಕರ ಗೌಡ ಅವರು ಮನೆಯಲ್ಲಿ ಒಬ್ಬರೇ ವಾಸವಿದ್ದು, ಅವರ ಪತ್ನಿ ಮತ್ತು ಮಕ್ಕಳು ಬೆಂಗಳೂರಿನಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ. ಘಟನೆ ನಡೆದ ದಿನ ರಾತ್ರಿ ಸುಮಾರು 1 ಗಂಟೆಯವರೆಗೂ ಅವರು ಎಚ್ಚರವಾಗಿದ್ದರೆಂದು ತಿಳಿದುಬಂದಿದ್ದು, ಬಳಿಕ ಮುಂಜಾನೆ ಎದ್ದು ನೋಡಿದಾಗ ಮನೆಯ ಬಾಗಿಲು ತೆರೆದಿರುವುದು ಗಮನಕ್ಕೆ ಬಂದಿದೆ. ಅನುಮಾನಗೊಂಡು ಮನೆಯೊಳಗೆ ಪರಿಶೀಲನೆ ನಡೆಸಿದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಕರುಣಾಕರ ಗೌಡ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದು, ಬೆಳ್ತಂಗಡಿ ಡಿವೈಎಸ್ಪಿ ರೋಹಿಣಿ, ವೃತ್ತ ನಿರೀಕ್ಷಕ ರವಿ ಬಿ.ಎಸ್. ಹಾಗೂ ಠಾಣಾಧಿಕಾರಿ ಕೌಶಿಕ್ ಬಿ.ಸಿ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳರು ರಾತ್ರಿ ವೇಳೆ ಸಂಚು ರೂಪಿಸಿ ಅತ್ಯಂತ ಚಾಣಾಕ್ಷತನದಿಂದ ಮನೆಯೊಳಗೆ ನುಗ್ಗಿ ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದ್ದು, ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಿ ಮಹತ್ವದ ಸುಳಿವುಗಳನ್ನು ಸಂಗ್ರಹಿಸುತ್ತಿದ್ದು, ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.




